ಹೋಟೆಲ್ ಪರಿಚಾರಿಕೆಗೆ ಆತ ಬಿಟ್ಟು ಹೋದ ಟಿಪ್ 66,000 ರೂಪಾಯಿ !

ಟೆಕ್ಸಾಸ್, ಎ. 23: ಟೆಕ್ಸಾಸ್ ನಗರದ ರೆಸ್ಟಾರೆಂಟೊಂದರಲ್ಲಿ ಪರಿಚಾರಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದ 18 ವರ್ಷದ ಅಲೇಶಾ ಪಾಲ್ಮರ್ ಗೆ ಇತ್ತೀಚೆಗೆ ಆಶ್ಚರ್ಯವೊಂದು ಕಾದಿತ್ತು. ಅನಾಮಿಕ ಗ್ರಾಹಕನೊಬ್ಬ ಆಕೆಗೆ ಬರೋಬ್ಬರಿ 1000 $ ಅಂದರೆ ಸುಮಾರು ರೂ. 66,000 ಟಿಪ್ ಬಿಟ್ಟು ಹೋಗಿದ್ದ.
ಕಾಲೇಜು ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿದ್ದ ಪರಿಚಾರಿಕೆ ಈ ಬಗ್ಗೆ ಬೇರೊಬ್ಬರೊಂದಿಗೆ ಮಾತನಾಡುವುದನ್ನು ಕೇಳಿಸಿಕೊಂಡಿದ್ದ ಗ್ರಾಹಕ ಆಕೆಗೆ ಸಹಾಯವಾಗಲೆಂದು ಹೀಗೆ ಮಾಡಿದ್ದ.
ಈ ಅಪರೂಪದ ಉಡುಗೊರೆ ನೋಡಿದಾಕ್ಷಣ ಅಲೇಶಾಳ ಕಂಗಳಲ್ಲಿ ನೀರು ತುಂಬಿ ಆಕೆ ತನ್ನ ಸುತ್ತ ಗ್ರಾಹಕರಿರುವಾಗಲೇ ಗನ್ ಬ್ಯಾರೆಲ್ ಸಿಟಿಯ ವೆಟೋನಿಯ ಇಟಾಲಿಯನ್ ರೆಸ್ಟಾರೆಂಟಿನಲ್ಲಿ ಜೋರಾಗಿ ಅಳಲು ಶುರು ಮಾಡಿದ್ದಳು.
ಆಕೆ ಇತ್ತೀಚೆಗೆ ರೆಸ್ಟಾರೆಂಟಿಗೆ ಆಗಮಿಸಿದ್ದ ದಂಪತಿಗಳಲ್ಲಿ ತನಗೆ ಕಾಲೇಜು ಶಿಕ್ಷಣ ಪಡೆಯುವ ಆಸೆಯಿರುವುದಾಗಿ ಹೇಳಿದ್ದಳು. ಆಗ ಹತ್ತಿರದಲ್ಲೇ ಇದ್ದ ಇನ್ನೊಬ್ಬ ಗ್ರಾಹಕ ತನ್ನ ಕುರ್ಚಿಯಿಂದೆದ್ದು ರೆಸ್ಟಾರೆಂಟಿನ ಮಾಲಕನ ಬಳಿ ಹೋಗಿದ್ದ. ಆತ ಹೊರ ಹೋದ ನಂತರ ಆಕೆಯ ಬಾಸ್ ಆತ ತನ್ನ ಬಿಲ್ಲಿನೊಂದಿಗೆ ಇರಿಸಿದ್ದ 1000 ಡಾಲರ್ ಟಿಪ್ ಆಕೆಗೆ ತೋರಿಸಿದ್ದರು. ಈ ಗ್ರಾಹಕ ತನ್ನ ಹೆಸರನ್ನು ಯಾರಲ್ಲೂ ಬಹಿರಂಗ ಪಡಿಸಬಾರದೆಂದು ಮಾಲಕನ ಬಳಿ ಹೇಳಿದ್ದಾನೆಂದು ತಿಳಿದು ಬಂದಿದೆ.







