ಬೆಳ್ತಂಗಡಿ: ವ್ಯಕ್ತಿಯ ಅನುಮಾನಾಸ್ಪದ ಸಾವು; ಕೊಲೆ ಶಂಕೆ

ಬೆಳ್ತಂಗಡಿ, ಎ. 23: ವೇಣೂರು ಸಮೀಪ ಸಾವ್ಯ ಎಂಬಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಮೃತ ಪಟ್ಟಿದ್ದು ಇದೊಂದು ಕೊಲೆ ಪ್ರಕರಣ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ವೇಣೂರು ಪೋಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಾವ್ಯ ನಿವಾಸಿ ಸುಂದರ ಮೂಲ್ಯ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ ಸುಂದರ ಮೂಲ್ಯ ಅವರ ಮನೆಯಲ್ಲಿ ಅವರೊಬ್ಬರೇ ಇದ್ದರು ಎನ್ನಲಾಗಿದೆ. ಪತ್ನಿ ಮತ್ತು ಮಕ್ಕಳು ತವರು ಮನೆಗೆ ತೆರಳಿದ್ದರು. ರಾತ್ರಿಯ ವೇಳೆ ಸುಂದರ ಮೂಲ್ಯ ಅವರ ಸಂಬಂಧಿಕರಾದ ಯುವಕರಿಬ್ಬರು ಸುಂದರ ಮೂಲ್ಯ ಅವರು ಕುಸಿದು ಬಿದ್ದು ಮೃತ ಪಟ್ಟಿದ್ದಾರೆ ಎಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಆದರೆ ಅವರ ಇತರೆ ಸಂಬಂಧಿಕರು ಹಾಗೂ ಸ್ಥಳೀಯರು ಬಂದು ನೋಡಿದಾಗ ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಅವರ ಕಿವಿಯಲ್ಲಿ ಹಾಗೂ ಮೈಮೇಲೆ ರಕ್ತ ಬರುತ್ತಿರುವುದನ್ನು ಗಮನಿಸಿ ತಡ ರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಸುಂದರ ಮೂಲ್ಯ ಅವರು ಮೃತಪಟ್ಟಿರುವುದಾಗಿ ಮೊದಲು ಮಾಹಿತಿ ನೀಡಿದ್ದ ಯುವಕರು ಇದೀಗ ನಾಪತ್ತೆಯಾಗಿದ್ದು ಅವರೇ ಕೊಲೆ ಗೈದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





