ಸಿಗರೇಟು ಕಂಪೆನಿಗಳಿಗೆ ಮಣೆಹಾಕುವ ಭರದಲ್ಲಿ ಬಡ ಬೀಡಿಕಾರ್ಮಿಕರನ್ನು ನಿರ್ಗತಿಕರನ್ನಾಗಿಸುತ್ತಿದೆ -ಸೀತರಾಮ ಡೇರಿಂಜೆ

ಮುಲ್ಕಿ, ಎ. 23: ಕೇಂದ್ರ ಸರಕಾರ ವಿದೇಶಿ ಸಿಗರೇಟು ಕಂಪೆನಿಗಳಿಗೆ ಮಣೆಹಾಕುವ ಭರದಲ್ಲಿ ಬಡ ಬೀಡಿಕಾರ್ಮಿಕರನ್ನು ನಿರ್ಗತಿಕರನ್ನಾಗಿಸುತ್ತಿದೆ ಎಂದು ಎಐಟಿಯುಸಿಯ ಕಾರ್ಯದರ್ಶಿ ಸೀತರಾಮ ಡೇರಿಂಜೆ ಆರೋಪಿಸಿದ್ದಾರೆ.
ಶನಿವಾರ ಟೆಲಿಫೋನ್ ಬೀಡಿ ಕಂಪೆನಿಯ ಮುಲ್ಕಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಬೀಡಿಗೆ ಸುಮಾರು ನೂರು ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಬೀಡಿ ಸೇದುವುದರಿಂದ ಪ್ರಾಣಕ್ಕೆ ಹಾನಿ ಎಂಬ ಕುಂಟು ನೆಪವೊಡ್ಡಿ ಕೇಂದ್ರ ಸರಕಾರ ಬೀಡಿ ನಿಶೇಧಿಸಲು ಮುಂದಾಗಿದೆ. ಈವರೆಗೆ ಬೀಡಿಸೇದಿ ಸಾವನ್ನಪ್ಪಿದವರ ವಿವರಣೆ ನೀಡಬೇಕೆಂದು ಆಗ್ರಹಿಸಿದರು.
ಟೆಲಿಫೋನ್ ಬೀಡಿ ಗುಜರಾತ್ ಮೂಲದ ಕಂಪೆನಿಯಾಗಿದ್ದು, ಕಂಪೆನಿಯ ನಿರ್ಲಕ್ಯದ ಪರಮಾವಧಿಗೆ ದೇಶಾಧ್ಯಂತ ಸುಮಾರು 10 ಕೋಟಿಗೂ ಮಿಕ್ಕಿ ಬೀಡಿ ಕಾರ್ಮಿಕರು ಕೆಲಸ ಕಳೆದು ಕೊಳ್ಳುವಂತಾಗಿದೆ. ಶೀಘ್ರ ಎಲ್ಲಾ ಬೀಡಿ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿದ ಅವರು, ಸರಕಾರ ವಿಧಿಸಿರುವ ನಿಯಮಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ದೇಶದಲ್ಲೇ ಬೀಡಿ ಕೈಗಾರಿಕೆ ದೇಶದ ಮುಖ್ಯ ಉದ್ದಿಮೆಯಾಗಿ ಬೆಳೆದಿದೆಯಾದರೂ ಪ್ರಸ್ತುತ ಕನಿಷ್ಠ 135 ರೂ. ಮಜೂರಿ ನೀಡಲಾಗುತ್ತಿದೆ. ಇದನ್ನು 300 ರೂ. ಗೆ ಏರಿಸಬೇಕು. ಬೀಡಿ ಕಾರ್ಮಿಕರಿಗೆ ಈ ವರೆಗೆ ಸರಕಾರ ಮತ್ತು ಕಂಪೆನಿಗಳು ಯಾವುದೇ ಭದ್ರತೆ ಕಲ್ಪಸುವಲ್ಲಿ ವಿಫಲವಾಗಿದ್ದು, ಎಲ್ಲಾ ರೀತಿಯ ಭದ್ರತೆ ನೀಡಬೇಕು. ಕಾರ್ಮಿಕರಿಗೆ ನೀಡಲಾಗುತ್ತಿದ್ದ ತುಟ್ಟಿ ಭತ್ತೆ ಕಳೆದ ವರ್ಷದಿಂದ ಕಾರ್ಮಿಕರಿಗೆ ವಿತರಿಸಿಲ್ಲ ಎಂದ ಎಐಟಿಯುಸಿಯ ಕೋಶಾಧಿಕಾರಿ ಎಂ. ಕರುಣಾಕರ ಬೀಡಿ ಕಾರ್ಮಿಕರ ಬದುಕು ಡೋಲಾಯಮಾನ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕೋಟ್ಯಾನ್, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಶ್ರೀಮತಿ ಸುಲೋಚನಾ, ಯೂನಿಯನ್ ಉಪಾಧ್ಯಕ್ಷ ಶಿವಪ್ಪ ಕೋಟ್ಯಾನ್, ಚಿತ್ರಾಕ್ಷಿ ಗುತ್ತಿಗೆದಾರರು ಉಪಸ್ಥಿತರಿದ್ದರು.
ಏಳು ಮಂದಿಯಿರುವ ತುಂಬು ಸಂಸಾರ ನಮ್ಮದು. ಬೀಡಿ ಕಟ್ಟಿ ದಿನದ ಒಪ್ಪೊತ್ತು ತಿನ್ನುವವರು ನಾವು. ಕಳೆದ ಹಲವು ದಿನಗಳಿಂದ ಕೆಲಸವಿಲ್ಲದೆ ಗಂಜಿಗೂ ಪರದಾಡುವಂತಗಿದ್ದು, ದಿನ ಸಾಗಿಸುವುದೇ ದುಸ್ಥರವಾಗಿದೆ.
ಶಾರದಾ, ಹೊಯ್ಗೆಗುಡ್ಡೆ
(ಬೀಡಿ ಕಾರ್ಮಿಕರು)
ಮಕ್ಕಳ ವಿಧ್ಯಾಭ್ಯಾಸ, ಮನೆ ರಿಪೇರಿ ಹೀಗೆ ಹಲವು ಸಮಸ್ಯೆಗಳಿಗೆ ಬೀಡಿಯನ್ನು ನಂಬಿಕೊಂಡು ಸ್ವಸಹಾಯ ಗುಂಪುಗಳು, ಬ್ಯಾಂಕ್‌ಗಳಿಂದ ಲೋನ್ ಪಡೆದು ಕೊಂಡಿದ್ದೇವೆ. ಹಲವುದಿನಗಳಿಂದ ಬೀಡಿ ಕೆಲಸ ಸ್ಥಬ್ಧಗೊಂಡಿರುವುದು ಆಕಶವೇ ತಲೆಯಮೇಲೆ ಬಿದ್ದಂತಾಗಿದೆ.
ಆಯಿಶಾ ಬಾನು,ಮುಲ್ಕಿ (ಬೀಡಿ ಕಾರ್ಮಿಕರು)
ಪ್ರತಿಭಟನೆಗಳ ಕಾವೇರುತ್ತಿರುವಂತೆಯೇ ಎಚ್ಚೆತ್ತುಕೊಂಡ ಟೆಲಿಪೋನ್ ಕಂಪೆನಿ ಸೋಮವಾರದಿಂದ ಕೆಲಸ ಕಲ್ಪಿಸುವ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ಭರವಸೆ ಟೊಳ್ಳಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಎಲ್ಲಾ ಬೀಡಿ ಕಂಪೆನಿಗಳ ಕಾರ್ಮಿಕರು ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸಲಾಗುವುದು ಎಂದು ಎಐಟಿಯುಸಿಯ ಕೋಶಾಧಿಕಾರಿ ಎಂ. ಕರುಣಾಕರ ತಿಳಿಸಿದ್ದಾರೆ.







