ಯಡಿಯೂರಪ್ಪ ಎಂದು ರಮಾನಾಥ್ ರೈ ಕಾರು ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
ಬಂಟ್ವಾಳ: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಂದು ಭಾವಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಾಮಾನಾಥ ರೈ ಅವರ ಕಾರಿನ ಮುಂದೆ ಬಿ.ಜೆ.ಪಿ. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆ ಶನಿವಾರ ಸಂಜೆ ಇಲ್ಲಿನ ಫರಂಗಿಪೇಟೆಯಲ್ಲಿ ನಡೆದಿದೆ.
ಕಲ್ಲಡ್ಕದ ಶ್ರೀರಾಮ ಮಂದಿರ ಲೋಕಾರ್ಪಣೆಗೊಳಿಸಲು ಯಡಿಯೂರಪ್ಪ ಇಂದು ಸಂಜೆ ಕಲ್ಲಡ್ಕಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಮಧ್ಯಾಹ್ನದಿಂದಲೇ ಫರಂಗಿಪೇಟೆಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರು, ಮುಖಂಡರು ಫರಂಗಿಪೇಟೆ ಜಂಕ್ಷನ್ ನಲ್ಲಿ ಜಮಾಯಿಸಿದ್ದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವ ಯಡಿಯೂರಪ್ಪ ಅಲ್ಲಿಂದ ಹೊರಟಿರುವ ಮಾಹಿತಿ ಜಮಾಯಿಸಿದ ಕಾರ್ಯಕರ್ತರಿಗೆ ಮೈಕ್ ಮೂಲಕ ಘೋಷಿಸಲಾಗಿತ್ತು.
ಅವರ ಬರುವನ್ನೇ ಕಾಯುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರಿನ ಮುಂದೆ ಅವರ ಬೆಂಗಾವಳು ವಾಹನ ಸೈರಾನ್ ಹಾಕುತ್ತಾ ಬರುತ್ತಿದ್ದಂತೆ ಯಡಿಯೂರಪ್ಪರವರೇ ಬಂದರೆಂದು ಭಾವಿಸಿದ ಬಿ.ಜೆ.ಪಿ. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ಆಗಮಿಸಿರುವುದು ರಮಾನಾಥ ರೈ ಎಂದು ತಿಳಿಯುತ್ತಿದ್ದಂತೆ ಬಿ.ಜೆ.ಪಿ. ಕಾರ್ಯಕರ್ತರು ಏನೂ ಸಂಭವಿಸದಂತೆ ನಟಿಸಿದರು. ಆದರೆ, ಇವೆಲ್ಲವನ್ನು ನಿಂತು ನೋಡುತ್ತಿದ್ದ ಸಾರ್ವಜನಿಕರು ಮುಸಿ ಮುಸಿ ನಕ್ಕರು.
ಫರಂಗಿಪೇಟೆಯಿಂದ ನೇರವಾಗಿ ಸಚಿವ ರಮಾನಾಥ ರೈಯವರ ಕಾರು ಬಿ.ಸಿ.ರೋಡು ಸಮೀಪದ ಕೈಕಂಬ ತಲುಪಿದಾಗ ಕಾರಿನ ಸೈರಾನ್ ಕೇಳಿ ಪೊಳಲಿ ದ್ವಾರದ ಬಳಿ ಸೇರಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು ಯಡಿಯೂರಪ್ಪ ಜೈ ಘೋಷಣೆ ಕೂಗುತ್ತಾ ಕಾರಿನ ಬಳಿಗೆ ಒಮ್ಮೆಲೆ ನುಗ್ಗಿದ ಘಟನೆಯೂ ನಡೆಯಿತು.
ಈ ವೇಳೆ ಸಚಿವರ ಬೆಂಗಾವಲು ವಾಹನದಲ್ಲಿದ್ದ ಪೊಲೀಸರು ಹಾಗೂ ಸಚಿವರ ಕಾರಿನಲ್ಲಿದ್ದ ಸಚಿವರು ಸೇರಿ ಇತ ರರು ನಗುವ ದ್ರಶ್ಯ ಕಂಡು ಬಂದವು.







