ಬಡವರಿಗೆ ಉಚಿತ ಎಲ್‌ಪಿಜಿ ಸಂಪರ್ಕ:8,000 ಕೋ.ರೂ. ಯೋಜನೆಗೆ ಮೇ.1ರಂದು ಪ್ರಧಾನಿ ಮೋದಿ ಚಾಲನೆ

ಹೊಸದಿಲ್ಲಿ,ಎ.23: ಬಿಪಿಎಲ್ ಕುಟುಂಬಗಳಿಗೆ ಐದು ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸುವ 8,000 ಕೋ.ರೂ.ಗಳ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ ’ಗೆ ಪ್ರಧಾನಿ ನರೇಂದ್ರ ಮೋದಿಯವರು ಮೇ 1ರಂದು ಉತ್ತರ ಪ್ರದೇಶದ ಬಲಿಯಾದಲ್ಲಿ ಚಾಲನೆ ನೀಡಲಿದ್ದಾರೆ. 1.13 ಕೋಟಿ ಎಲ್‌ಪಿಜಿ ಬಳಕೆದಾರರು ಸ್ವಯಿಚ್ಛೆಯಿಂದ ತಮ್ಮ ಸಬ್ಸಿಡಿಗಳನ್ನು ಬಿಟ್ಟುಕೊಟ್ಟಿರುವುದರಿಂದ ಉಳಿತಾಯವಾಗಿರುವ ಹಣವನ್ನು ಈ ಯೋಜನೆಗೆ ಬಳಸಲಾಗುವುದು.
ಇದೇ ಕಾರ್ಯಕ್ರಮ ಮೇ.15ರಂದು ಗುಜರಾತ್‌ನ ದಾಹೋಡ್‌ನಲ್ಲಿ ಪುನರಾವರ್ತನೆಗೊಳ್ಳಲಿದೆ.
ಎಲ್‌ಪಿಜಿ ಸಬ್ಸಿಡಿಯನ್ನು ತ್ಯಾಗ ಮಾಡುವಂತೆ ಆರ್ಥಿವಾಗಿ ಸಬಲ ಬಳಕೆದಾರರನ್ನು ಕೋರಿಕೊಳ್ಳುವ ‘ಗಿವ್-ಇಟ್-ಅಪ್’ಅಭಿಯಾನ 2015, ಜನವರಿಯಲ್ಲಿ ಆರಂಭಗೊಂಡಿತ್ತಾದರೂ ಪ್ರಧಾನಿಯವರು ಕಳೆದ ವರ್ಷದ ಮಾ.27ರಂದು ಅದಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು.
ಈ ಅಭಿಯಾನದಡಿ 1.13 ಕೋ.ಜನರು ತಮ್ಮ ಸಬ್ಸಿಡಿಗಳನ್ನು ತ್ಯಾಗ ಮಾಡಿ ಮಾರುಕಟ್ಟೆ ದರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಖರೀದಿಸುತ್ತಿದ್ದಾರೆ ಎಂದು ತೈಲ ಸಚಿವ ಧಮೇಂದ್ರ ಪ್ರಧಾನ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ(16.44 ಲ.) ಬಳಕೆದಾರರು ಸಬ್ಸಿಡಿಯನ್ನು ತ್ಯಾಗ ಮಾಡಿದ್ದಾರೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ(13 ಲ.) ಮತ್ತು ದಿಲ್ಲಿ(7.26 ಲ) ಇದ್ದರೆ, ಪ್ರಧಾನಿಯವರ ತವರು ರಾಜ್ಯ ಗುಜರಾತಿನಲ್ಲಿ ಸಬ್ಸಿಡಿ ತ್ಯಾಗ ಮಾಡಿದವರ ಸಂಖ್ಯೆ ಕೇವಲ 4.2 ಲ. ಪ್ರಧಾನ ಅವರ ತವರು ರಾಜ್ಯ ಒಡಿಶಾದಲ್ಲಂತೂ ಈ ಸಂಖ್ಯೆ ಇನ್ನೂ ಕಡಿಮೆ...ಅಂದರೆ 1.3ಲ.ಮಾತ್ರ!
ಎಲ್‌ಪಿಜಿ ಸಬ್ಸಿಡಿ ತ್ಯಾಗ ಮಾಡಿದವರ ಪೈಕಿ ಅರ್ಧಕ್ಕೂ ಹೆಚ್ಚಿನ ಜನರು ಮಹಾರಾಷ್ಟ್ರ,ಉ.ಪ್ರದೇಶ,ದಿಲ್ಲಿ,ಕರ್ನಾಟಕ ಮತ್ತು ತಮಿಳುನಾಡು...ಈ ಐದು ರಾಜ್ಯಗಳಿಗೆ ಸೇರಿದ್ದಾರೆ ಎಂದು ಪ್ರಧಾನ ತಿಳಿಸಿದರು.
ಅಭಿಯಾನದ ಮೂಲಕ ಸುಮಾರು 5,000 ಕೋ.ರೂ.ಸಬ್ಸಿಡಿ ಉಳಿತಾಯವಾಗಿದ್ದು, ಈ ಮೊತ್ತವನ್ನು ಬಡವರಿಗೆ ಎಲ್‌ಪಿಜಿ ಸಂಪರ್ಕ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ. ಕಳೆದೊಂದು ವರ್ಷದಲ್ಲಿ ಬಡವರಿಗಾಗಿ 60 ಲಕ್ಷ ಸಂಪರ್ಕಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪ್ರಧಾನ ತಿಳಿಸಿದರು.
ಉಜ್ವಲ ಯೋಜನೆಯಡಿ ಐದು ಕೋಟಿ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು 8,000 ಕೋ.ರೂ.ಗಳನ್ನು ನಿಗದಿಗೊಳಿಸಲಾಗಿದೆ. ಮೊದಲ ವರ್ಷದಲ್ಲಿ 1.5 ಕೋ.ಸಂಪರ್ಕಗಳನ್ನು ಒದಗಿಸಲಾಗುವುದು ಎಂದರು.
ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ಎಲ್‌ಪಿಜಿ ಸಂಪರ್ಕಕ್ಕೆ 1,600 ರೂ.ಆರ್ಥಿಕ ನೆರವು ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.







