ಪುತ್ತೂರು: ಪ್ಲಾಸ್ಟಿಕ್ ಮಾರಾಟದ ವಿರುದ್ಧ ಕಾರ್ಯಾಚರಣೆ

ಪುತ್ತೂರು: ಪುತ್ತೂರು ನಗರದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುವ ಹೋಲ್‌ಸೇಲ್ ಅಂಗಡಿಗಳಿಗೆ ಶನಿವಾರ ಪುತ್ತೂರು ನಗರಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು.
ನಗರದ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 8 ಹೋಲ್ ಸೇಲ್ ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳು ಅಂಗಡಿಗಳಲ್ಲಿ ದಾಸ್ತಾನು ಇರಿಸಲಾಗಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ನೋಟೀಸ್ ನೀಡಿದ್ದಾರೆ. ಪಾಸ್ಟಿಕ್ ವಸ್ತುಗಳನ್ನು ಮಾರಾಟ ಹಾಗೂ ದಾಸ್ತಾನು ಇರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಎಲ್ಲಾ ರೀತಿಯ ಪ್ಲಾಸ್ಟಿಕ್‌ಗಳ ಬಳಕೆಯನ್ನು ನಿಷೇಧಿಸಿ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಪ್ಲಾಸ್ಟಿಕ್ ನಿಷೇಧದ ಸಂದರ್ಭದಲ್ಲಿ ಮೈಕ್ರೋನ್ ಮಿತಿ ಇಲ್ಲ. ಎಲ್ಲಾ ತರಹದ ಪ್ಲಾಸ್ಟಿಕ್ ವಸ್ತುಗಳು, ಥರ್ಮಾಕೋಲ್ ಮೊದಲಾದವುಗಳನ್ನು ಬಳಸುವಂತಿಲ್ಲ. ಸರಕಾರದ ಆದೇಶದಂತೆ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪುತ್ತೂರು ನಗರಸಭಾ ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಪುತ್ತೂರು ತಹಶೀಲ್ದಾರ್ ಸಣ್ಣ ರಂಗಯ್ಯ, ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್, ಪುತ್ತೂರು ನಗರ ಪೊಲೀಸರು ಪಾಲ್ಗೊಂಡಿದ್ದರು.







