ಬೇಗುಸರಾಯ್ ಪ್ರಕರಣ:ಬಿಹಾರ ಭವನದಲ್ಲಿ ಜೆಎನ್‌ಯು ವಿದ್ಯಾಥಿಗಳ ಪ್ರತಿಭಟನೆ,ಬಂಧನ

ಹೊಸದಿಲ್ಲಿ,ಎ.23: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಕಳೆದ ತಿಂಗಳು ಇಬ್ಬರು ದಲಿತ ಸಿಪಿಐ(ಎಂಎಲ್) ಕಾರ್ಯಕರ್ತರ ಹತ್ಯೆಗಳನ್ನು ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿಗಳ ಗುಂಪೊಂದು ಶನಿವಾರ ಇಲ್ಲಿಯ ಚಾಣಕ್ಯಪುರಿಯಲ್ಲಿನ ಬಿಹಾರ ಭವನದೆದುರು ಪ್ರತಿಭಟನೆ ನಡೆಸಿದರು. ಭವನದ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ಮೃತ ವ್ಯಕ್ತಿಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಭವನದ ಹಿರಿಯ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಲು ಬಯಸಿದ್ದ ವಿದ್ಯಾರ್ಥಿಗಳು ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಬಿಹಾರ ಭವನದ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ನಮ್ಮ ಕಾಮ್ರೇಡ್‌ಗಳ ಹತ್ಯೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೆವು. ಅಹವಾಲು ಸಲ್ಲಿಸಲು ಒಳ ಪ್ರವೇಶಿಸಿದಾಗ ಪೊಲೀಸ್ ಅಧಿಕಾರಿಗಳು ನಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷೆ ಸುಚೇತಾ ಡೇ ಆರೋಪಿಸಿದರು.
ಬಂಧಿತ ಪ್ರತಿಭಟನಾಕಾರರಲ್ಲಿ ಸಿಪಿಐ(ಎಂಎಲ್) ದಿಲ್ಲಿ ರಾಜ್ಯ ಕಾರ್ಯದರ್ಶಿ ರವಿ ರಾಯ್ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮ ನಾಗಾ ಅವರೂ ಸೇರಿದ್ದಾರೆ.
ಫೆ.9ರಂದು ಜೆಎನ್‌ಯು ಕ್ಯಾಪಸ್‌ನಲ್ಲಿ ನಡೆದಿದ್ದ ವಿವಾದಾತ್ಮಕ ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣದ ಆರೋಪಿಗಳಲ್ಲಿ ನಾಗಾ ಓರ್ವರಾಗಿದ್ದಾರೆ.
ಬೇಗುಸರಾಯ್ ಜಿಲ್ಲೆಯ ಮಸುದನಪುರ ದಿಯಾರಾದಲ್ಲಿ ಕಳೆದ ತಿಂಗಳು ಇಬ್ಬರು ಸಿಪಿಐ(ಎಂಎಲ್) ಲಿಬರೇಷನ್ ಕಾರ್ಯಕರ್ತರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.







