ಪಠ್ಯದಲ್ಲಿ ಕೌಶಲ್ಯ ವೃದ್ಧಿಸುವ ವಿಷಯ ಸೇರ್ಪಡೆಯಾಗಲಿ: ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ
ಬೃಹತ್ ಉದ್ಯೋಗ ಮೇಳ
.jpg)
ಸಾಗರ,ಎ.23: ಪದವಿ ಸೇರಿದಂತೆ ಯಾವ ಪಠ್ಯ ಪುಸ್ತಕದಲ್ಲಿಯೂ ವಿದ್ಯಾರ್ಥಿಗಳಿಗೆ ಇಂತಹ ಉದ್ಯೋಗ ಆಯ್ಕೆ ಮಾಡಿಕೊಳ್ಳಿ ಎಂದು ತೋರಿಸಿರುವುದಿಲ್ಲ. ಯುವಜನರ ಕೌಶಲ್ಯಕ್ಕೆ ಪೂರಕವಾದ ಉದ್ಯೋಗ ಸಿಗದಿರುವ ಶೂನ್ಯಸ್ಥಿತಿಯಲ್ಲಿ ನಾವಿದ್ದೇವೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಇಲ್ಲಿನ ಇಂದಿರಾಗಾಂಧಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ ಬೆಂಗಳೂರಿನ ಡಿಸ್ಪೈಲ್ ಇಂಡಿಯಾ ಗ್ರೂಪ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದು ಹೊರ ಬರುತ್ತಿದ್ದಾರೆ. ಅವರಿಗೆ ಉದ್ಯೋಗ ಕೊಡುವುದು ಸವಾಲು ಎನಿಸುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸರಕಾರ ಸಹ ಇಕ್ಕಟ್ಟಿಗೆ ಸಿಲುಕುವ ಸ್ಥಿತಿ ಇದೆ. ಒಂದು ರೀತಿಯಲ್ಲಿ ಪದವಿ ಪಡೆದು ಹೊರಬರುವ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತಿದೆ. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ವಿದ್ಯೆಗೆ ತಕ್ಕ ಉದ್ಯೋಗ ನೀಡುವ ಕೆಲಸವಾಗಬೇಕು ಎಂದರು.
ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಕಡಿಮೆ ಇರುತ್ತದೆ. ವಿದ್ಯಾಭ್ಯಾಸದಲ್ಲಿ ಒಂದಷ್ಟು ಬದಲಾವಣೆ ಅಗತ್ಯವಾಗಿದ್ದು, ಪಠ್ಯದಲ್ಲಿ ಕೌಶಲ್ಯ ವೃದ್ಧಿಸುವ ವಿಷಯಗಳು ಸೇರ್ಪಡೆಯಾಗಬೇಕು. ಇಂತಹ ಉದ್ಯೋಗ ಮೇಳಗಳು ಯುವಜನರ ವಿದ್ಯೆ, ಕೌಶಲ್ಯಕ್ಕೆ ತಕ್ಕ ಉದ್ಯೋಗವನ್ನು ಕಲ್ಪಿಸುವಂತೆ ಆಗಬೇಕು ಎಂದು ಹೇಳಿದರು. ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ವೆಂಕಟೇಶ್ ಕೆ.ವಿ. ಮಾತನಾಡಿ, ಪದವಿ ಪಡೆದ ಎಲ್ಲರಿಗೂ ಸರಕಾರ ಉದ್ಯೋಗ ನೀಡಲು ಸಾಧ್ಯವಿಲ್ಲ. ಬದಲಾದ ದಿನಮಾನಗಳಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತಿದೆ. ಯುವಜನರು ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಉದ್ಯೋಗವನ್ನು ಇಂತಹ ಮೇಳಗಳ ಮೂಲಕ ಪಡೆಯಬೇಕು ಎಂದರು. ಪ್ರಾಚಾರ್ಯ ಪ್ರೊ. ಉಮೇಶ್ ಪಿ. ಅಧ್ಯಕ್ಷತೆ ವಹಿಸಿದ್ದರು. ಡಿಸ್ಪೈಲ್ ಇಂಡಿಯಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್, ಉದ್ಯಮಿಗಳಾದ ವಿನೋದ್ ಸಿ. ಡಿಸಿಲ್ವ, ಮಹೀಂದ್ರ ಕಂಪೆನಿಯ ಅರವಿಂದ್ ಬಿ.ಟಿ., ಸಿಕ್ಸರ್ ಜಾಬ್‌ನ ಶ್ರೀಪಾದ್ ವಿ., ಕಾಲೇಜು ಅಭಿವೃದ್ಧ್ದಿ ಸಮಿತಿಯ ಡಾ. ಕಾರಿಯಪ್ಪ, ಎಸ್.ಬಿ.ಮಹಾದೇವ್, ಬಿ.ವಾಸು, ಮಾರುತಿ ಜಿ., ಮಹಾಬಲೇಶ್ವರ ಕೆ.ಎನ್. ಇನ್ನಿತರರು ಹಾಜರಿದ್ದರು. ಉಪಸ್ಥಿತರಿದ್ದರು.







