ಮಹಿಳೆಯರನ್ನು ದ್ವಿತೀಯ ದರ್ಜೆಯಲ್ಲಿ ಕಾಣಲಾಗುತ್ತಿದೆ: ಉಮಾಶ್ರೀ
.jpg)
ಚಿಕ್ಕಮಗಳೂರು, ಎ.23: ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಮಹಿಳೆಯರ ಬಗ್ಗೆ ಕೀಳರಿಮೆ ಇದೆ. ಮಹಿಳೆಯರನ್ನು ಮನುಸ್ಮತಿಯಂತೆ ದ್ವಿತೀಯ ದರ್ಜೆಯಲ್ಲಿ ಕಾಣುತ್ತಿದ್ದು, ಒಂದೆಡೆ ಮಹಿಳೆ ಪೂಜಾರ್ಹಳು ಎನ್ನುತ್ತಲೇ ಮತ್ತೊಂದೆಡೆ ಅತ್ಯಂತ ಕೀಳಾಗಿ ಕಾಣುವುದು ನಡೆಯುತ್ತಿದೆ. ಅಂತಹದನ್ನು ಮಹಿಳೆ ಅರ್ಥಮಾಡಿ ಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಕಲಾವಿದೆ ಉಮಾಶ್ರೀ ಹೇಳಿದರು.
ಅವರು ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ತಮ್ಮ ಇಲಾಖೆ ಆಯೋಜಿಸಿದ್ದ ವಿಭಾಗ ಮಟ್ಟದ ಮಹಿಳಾ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಬಗ್ಗೆ ವಿಶ್ವದ ಶ್ರೇಷ್ಠ ತತ್ವಜ್ಞಾನಿ ಸಾಕ್ರೆಟಿಸ್ ಸೇರಿದಂತೆ ಅರಿಸ್ಟಾಟಲ್ ಮುಂತಾದವರು ಕೂಡ ಮಹಿಳೆಯರನ್ನು ದೂರವಿರಿಸುವ ತತ್ವವನ್ನು ಪ್ರತಿಪಾದಿಸಿದವರು. ಅದೇ ರೀತಿ ಭಾರತದಲ್ಲೂ ಸಾಗಿದೆ. ಹಿಂದೂಗಳು ಅನುಸರಿಸುವ ಅನೇಕ ನಿಯಮಗಳು ಮನುಸ್ಮತಿಯ ನಿರ್ದೇಶನದಂತಿದೆ ಎಂದು ನುಡಿದರು.
ಇಂತಹ ಸಂಸ್ಕೃತಿ ಕಾರ್ಯಕ್ರಮದಲ್ಲಿ ಮಹಿಳೆ ಭಾಗವಹಿಸುವುದರಿಂದ ತಾನು ಒಬ್ಬಂಟಿಯಲ್ಲ. ಮಹಿಳಾ ಸಮಾಜ ತನ್ನ ಜೊತೆಗಿದೆ ಎಂಬ ಭಾವನೆಯ ಜೊತೆಗೆ ಚಿಂತನಾಶೀಲ ಮನಸ್ಥಿತಿ ಹೆಚ್ಚಾಗುತ್ತದೆ ಎಂದರು.
ಇದಕ್ಕೂ ಮುನ್ನ ನಗರದ ಹಳೆ ತಾಲೂಕು ಕಚೆೇರಿ ಆವರಣದಲ್ಲಿ ಮಹಿಳಾ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಜಾನಪದ ಕಲಾತಂಡಗಳನ್ನು ಒಳಗೊಂಡ ವೈಭವಯುತ ಮೆರವಣಿಗೆಗೆ ನಾಡಿನ ಖ್ಯಾತ ಗಾಯಕಿ ಬಿ.ಕೆ.ಸುಮಿತ್ರಾ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮಹಿಳಾ ವೀರಗಾಸೆ ತಂಡ, ಮಹಿಳಾ ಡೊಳ್ಳು, ಬಂಜಾರನ್ ನೃತ್ಯಗಳು ನೋಡುಗರ ಕಣ್ಮನ ಸೆಳೆದವು. ನಗರದ ಕುವೆಂಪು ಕಲಾಮಂದಿರದ ವೇದಿಕೆಯನ್ನು ಕಲಾವಿದ ಜಗದೀಶ್ ಮತ್ತು ತಂಡದವರು ಬಹು ಸುಂದರವಾಗಿ ವಿನ್ಯಾಸಗೊಳಿಸಿದರು. ಶಾಂತಿನಿಕೇತನ ಕಲಾ ಮಹಾವಿದ್ಯಾನಿಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಶಿಬಿರದಲ್ಲಿ ಕಲಾವಿದರ ಕುಂಚದಿಂದ ಒಡಮೂಡಿದ ಹಲವು ಕಲಾಕೃತಿಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಅಂದ ಹೆಚ್ಚಿಸಿತ್ತು.
ವೇದಿಕೆಯಲ್ಲಿ ಮಾಜಿ ಸಚಿವೆ ಮೋಟಮ್ಮ, ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ, ಅಪರ ಜಿಲ್ಲಾಧಿಕಾರಿ ವೈಶಾಲಿ, ಗಾಯಕಿ ಬಿ.ಕೆ.ಸುಮಿತ್ರಾ, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಸಿಡಿಎ ಅಧ್ಯಕ್ಷ ಚಂದ್ರೇಗೌಡ, ಮಲೆನಾಡು ಅಭಿವೃದ್ಧಿ ಸದಸ್ಯೆ ಬಿ.ಸಿ ಗೀತಾ, ಮಾಜಿ ನಗರಸಭಾ ಸದಸ್ಯೆ ಪದ್ಮತಿಮ್ಮೇಗೌಡ, ಬಿಎಸ್‌ಪಿ ಸಂಚಾಲಕ ಕೆ.ಟಿ.ರಾಧಾಕೃಷ್ಣ ಮತ್ತಿತರರು ಉಪಸ್ಥತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ್ ಸ್ವಾಗತಿಸಿ, ಸಹಾಯಕ ನಿರ್ದೇಶಕ ರಮೇಶ್ ವಂದಿಸಿದರು.
ಹೆಣ್ಣು ಭ್ರೂಣಹತ್ಯೆ ಭಾರತಕ್ಕೆ ಸೀಮಿತವಲ್ಲ. ವಿಶ್ವದ ಅನೇಕ ದೇಶಗಳಲ್ಲಿ ಅಂತಹ ಕೃತ್ಯ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಕ್ರೂರ ಕೃತ್ಯ ಹೀಗೆ ಮುಂದುವರಿದರೆ ಲಿಂಗ ಅನುಪಾತದಲ್ಲಿ ತೀವ್ರ ವ್ಯತ್ಯಾಸವಾಗಿ ಒಂದು ಹೆಣ್ಣು ನಾಲ್ಕಾರು ಗಂಡಸರನ್ನು ಮದುವೆಯಾಗಬೇಕಾದ ಅನಿವಾರ್ಯತೆ ಎದುರಾಗಬಹುದು.ರಾಮಾಯಣ ಬರೆದವರು ಹೆಣ್ಣನ್ನು ನಗಾರಿಯಂತೆ ಬಡಿಯಬೇಕು ಎಂದಿದ್ದರು. ಅಂದರೆ ಹೆಣ್ಣಿನ ಮೇಲೆ ದೌರ್ಜನ್ಯ ನಿರಂತರವಾಗಿ ಆಗುತ್ತಿದೆ.
- ಸಾಹಿತಿ ನಾಡೋಜ ಕಮಲಾ ಹಂಪನ್
ಎಲ್ಲೆಡೆ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದೆ. ಹೆಣ್ಣು ಗರ್ಭದಲ್ಲಿರುವಾಗಲೇ ಶೋಷಣೆಗೆ ಒಳಗಾಗುತ್ತಿದ್ದಾಳೆ ಎಂದ ಅವರು, ಮಹಿಳಾ ಶೋಷಣೆ ಅಂತಾರಾಷ್ಟ್ರೀಯ ಸಮಸ್ಯೆಯಾಗಿದ್ದು, ಅದರ ಪರಿಹಾರಕ್ಕೆ ಸ್ವತಃ ಮಹಿಳೆಯೇ ಸಿಡಿದು ನಿಲ್ಲಬೇಕು.
- ಮೋಟಮ್ಮ. ಮಾಜಿ ಸಚಿವೆ







