ಒಡಿಶಾ,ತೆಲಂಗಾಣದಲ್ಲಿ ಬಿಸಿಲಿಗೆ ಕನಿಷ್ಠ 128 ಬಲಿ
ದೇಶಾದ್ಯಂತ ಉಷ್ಣ ಮಾರುತದ ಹಾವಳಿ

ಹೊಸದಿಲ್ಲಿ,ಎ.23: ಉಷ್ಣ ಮಾರುತದ ತೀವ್ರತೆಗೆ ದೇಶವಿಡೀ ತತ್ತರಗೊಂಡಿದೆ. ತಾಪಮಾನ ದಿನೇದಿನೇ ಏರುತ್ತಲೇ ಇದ್ದು, ತೆಲಂಗಾಣ ಮತ್ತು ಒಡಿಶಾಗಳಲ್ಲಿ ಬಿಸಿಲಿಗೆ ಬಲಿಯಾಗುತ್ತಿರುವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಒಡಿಶಾದಲ್ಲಿ ಬಿಸಿಲಿನ ಝಳಕ್ಕೆ ಸಾವನ್ನಪ್ಪಿದವರ ಸಂಖ್ಯೆ ಶನಿವಾರ 79ಕ್ಕೇರಿದ್ದರೆ,ಅತ್ತ ತೆಲಂಗಾಣದಲ್ಲಿ ಕನಿಷ್ಠ 49 ಜೀವಗಳು ಬಲಿಯಾಗಿವೆ.
ಶನಿವಾರ ಒಡಿಶಾದ ಟಿಟ್ಲಾಗಡದಲ್ಲಿ 48 ಡಿ.ಸೆ.ತಾಪಮಾನ ದಾಖಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ತಾಪಮಾನ 45 ಡಿ.ಸೆ.ದಾಟಿತ್ತು.
ತೆಲಂಗಾಣದ ಹೆಚ್ಚಿನ ಪ್ರದೇಶಗಳಲ್ಲಿ ಕಳೆಡೆರಡು ವಾರಗಳಿಂದ ತಾಪಮಾನ 40 ಡಿ.ಸೆ.ಗಿಂತ ಮೇಲೆಯೇ ಇದ್ದು, ಸರಕಾರವು ಎಲ್ಲ ಜಿಲ್ಲೆಗಳಲ್ಲಿ ಉಷ್ಣ ಮಾರುತ ಎಚ್ಚರಿಕೆಯನ್ನು ಹೊರಡಿಸಿದೆ.ತೆಲಂಗಾಣದ ಕೆಲವು ಪ್ರದೇಶಗಳಲ್ಲಿ ಉಷ್ಣ ಮಾರುತ ಸ್ಥಿತಿ ರವಿವಾರವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಶನಿವಾರ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ತೆಲಂಗಾಣ ಸರಕಾರವೂ ಉಷ್ಣಮಾರುತ ಎಚ್ಚರಿಕೆ ನೀಡಲು ವೆಬ್ ಪೋರ್ಟಲ್ ಸ್ಥಾಪಿಸಿದ್ದು, ತುರ್ತು ಸ್ಥಿತಿಯ ಸಂದರ್ಭದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ತನ್ಮಧ್ಯೆ ಒಡಿಶಾ ಮತ್ತು ತೆಲಂಗಾಣ ರಾಜ್ಯ ಸರಕಾರಗಳು ಬಿಸಿಲಿನ ತಾಪಕ್ಕೆ ಮೃತಪಟ್ಟವರ ಕುಟುಂಬಗಳಿಗೆ ತಲಾ 50,000 ರೂ ಪರಿಹಾರವನ್ನು ಘೋಷಿಸಿವೆ.





