ಪರಿಸರ ಮಾಲಿನ್ಯ ತಡೆಗೆ ಆಟೊಗಳಿಗೆ ಸಹಾಯಧನ: ಡಾ.ಮಸೂದ್ ಫೌಜ್ದಾರ್
ಬೆಂಗಳೂರು, ಎ.23: ರಾಜ್ಯದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಆಟೊಗಳಲ್ಲಿರುವ 2 ಸ್ಟ್ರೋಕ್ ಎಂಜಿನ್ ಅನ್ನು 4 ಸ್ಟ್ರೋಕ್‌ಗೆ ಪರಿವರ್ತನೆಗೊಳಿಸಲು ಸಹಾಯಧನ ನೀಡುವ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ಅಧ್ಯಕ್ಷ ಡಾ.ಮಸೂದ್ ಫೌಜ್ದಾರ್ ತಿಳಿಸಿದ್ದಾರೆ.
ಶನಿವಾರ ನಗರದ ವಿಶ್ವೇಶ್ವರಯ್ಯ ಪೋಡಿಯಂನಲ್ಲಿರುವ ಕೆಎಂಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಇಲಾಖೆ ಒಬ್ಬ ಫಲಾನುಭವಿಗೆ 30 ಸಾವಿರ ರೂ.ಒಂದಾವರ್ತಿ ಸಹಾಯಧನ ನೀಡುತ್ತದೆ. ಕೆಎಂಡಿಸಿ ವತಿಯಿಂದ 30 ಸಾವಿರ ರೂ.ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ಆಟೊ ಮಾಲಕರು ಹಣಕಾಸು ಸಂಸ್ಥೆಗಳ ಮೂಲಕ ಭರಿಸಿಕೊಳ್ಳಬೇಕು ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ಅಂದಾಜು 25 ಸಾವಿರ 2 ಸ್ಟ್ರೋಕ್ ಆಟೊಗಳಿದ್ದು, ಈ ಪೈಕಿ 5-7 ಸಾವಿರ ಆಟೊಗಳು ಅಲ್ಪಸಂಖ್ಯಾತ ವರ್ಗದವರ ಮಾಲಕತ್ವದಲ್ಲಿವೆ. ಆಟೊಗಳ ಎಂಜಿನ್ ಅನ್ನು 2 ಸ್ಟ್ರೋಕ್‌ನಿಂದ 4 ಸ್ಟ್ರೋಕ್‌ಗೆ ಪರಿವರ್ತನೆ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಗೊಳಿಸಬಹುದು ಎಂದು ಅವರು ಹೇಳಿದರು.
ಹೊಸ ಯೋಜನೆಗಳಿಗಾಗಿ ಸಮೀಕ್ಷೆ: ರಾಜ್ಯದಲ್ಲಿನ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಸಂಬಂಧ ಅವರ ವಾಸ್ತವ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮಸೂದ್ ಫೌಜ್ದಾರ್ ತಿಳಿಸಿದರು.
ಕಳೆದ 15-20 ವರ್ಷಗಳಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅದೇ ಯೋಜನೆಗಳು, ಕಾರ್ಯಕ್ರಮಗಳು ಅಸ್ತಿತ್ವದಲ್ಲಿವೆ. ಇಂದಿನ ಅಗತ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮಗಳು, ಯೋಜನೆಗಳಲ್ಲಿ ಬದಲಾವಣೆ ಅಗತ್ಯ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಲ್ಪಸಂಖ್ಯಾತರಿಗೆ ಕಲ್ಯಾಣಕ್ಕೆ ಯಾವ ರೀತಿಯ ಯೋಜನೆಗಳ ಅಗತ್ಯವಿದೆ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.
ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ: ಚೆಕ್ ಮೂಲಕ ನಡೆಸುವ ವ್ಯವಹಾರವನ್ನು ಸ್ಥಗಿತಗೊಳಿಸಲಾಗುತ್ತಿದ್ದು, ನಿಗಮದಿಂದ ಜಾರಿಗೊಳಿಸುತ್ತಿರುವ ಎಲ್ಲ ಸಹಾಯಧನ ಮತ್ತು ಸಾಲ ಸೌಲಭ್ಯ ಯೋಜನೆಗಳ ಫಲಾನುಭವಿಗಳಿಗೆ ಹಣವನ್ನು ಈ ವರ್ಷದಿಂದ ಆರ್‌ಟಿಜಿಎಸ್ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಮಸೂದ್ ಫೌಜ್ದಾರ್ ತಿಳಿಸಿದರು.
ಆರ್‌ಟಿಜಿಎಸ್ ವ್ಯವಸ್ಥೆಯಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬಹುದು. ಅಲ್ಲದೆ, ‘ಮಾರ್ಜಿನ್ ಹಣ’ ಸಾಲ ಸೌಲಭ್ಯ ಹೊರತುಪಡಿಸಿ ಶ್ರಮಶಕ್ತಿ ಯೋಜನೆಯಡಿ ಸಾಲ ಅಥವಾ ಸಹಾಯಧನ ಪಡೆಯುವ ಫಲಾನುಭವಿಗಳಿಗೆ ಈ ವರ್ಷದಿಂದ ‘ನಿರಾಕ್ಷೇಪಣಾ ಪತ್ರ’ದಿಂದ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು.
ಉನ್ನತ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿದ್ದ ‘ಅರಿವು’ ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಬಿಎ ಹಾಗೂ ಬಿ.ಕಾಂ ಪದವಿಯನ್ನು ಸೇರಿಸಲಾಗಿದೆ. ಶ್ರಮಶಕ್ತಿ ಯೋಜನೆಯಡಿಯಲ್ಲಿ ಘಟಕ ವೆಚ್ಚವನ್ನು 25 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಕೆಎಂಡಿಸಿಗೆ 2016-17ನೆ ಸಾಲಿನ ಬಜೆಟ್‌ನಲ್ಲಿ 200 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಕಳೆದ ವರ್ಷಕ್ಕಿಂತ 55 ಕೋಟಿ ರೂ.ಹೆಚ್ಚು ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು.
ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕಿ ನಿಖ್ಖತ್ ತಬ್ಬಸ್ಸುಮ್ ಆಬ್ರೊ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಲ್ಪಸಂಖ್ಯಾತರಿಗೆ ಇಂಗ್ಲಿಷ್ ಮಾತನಾಡುವ (ಸ್ಪೋಕನ್ ಇಂಗ್ಲಿಷ್) ಕೋರ್ಸ್‌ಗಳನ್ನು ಪರಿಚಯಿಸುವುದರಿಂದ ಕಾಲ್‌ಸೆಂಟರ್, ಬಿಪಿಓಗಳಲ್ಲಿ ಸುಲಭವಾಗಿ ಕೆಲಸ ಸಿಗುತ್ತದೆ. 20-25 ಮಹಿಳೆಯರು ಇರುವ ಸ್ವಸಹಾಯ ಗುಂಪುಗಳಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಬೇಕಿದೆ ಎಂದರು.
ಹೊಟೇಲ್‌ಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ನಡುವೆ ಸಂಪರ್ಕ ಏರ್ಪಡಿಸಿ, ಹೊಟೇಲ್‌ಗಳಿಗೆ ಅಗತ್ಯವಿರುವ ತಿಂಡಿ, ತಿನಿಸುಗಳನ್ನು ಈ ಗುಂಪುಗಳೆ ಸಿದ್ಧಪಡಿಸಿ ಸರಬರಾಜು ಮಾಡುವುದಿಂದ ಮನೆಯಲ್ಲಿದ್ದುಕೊಂಡೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ನಿಗಮದ ನಿರ್ದೇಶಕರಾದ ಡಾ.ಎ.ಜೆ.ಅಕ್ರಮ್‌ಪಾಷ, ಇಲ್ಯಾಸ್ ಅಹ್ಮದ್, ಅಲ್ಲಾ ಬಕ್ಷ್ ಉಪಸ್ಥಿತರಿದ್ದರು.







