ಅಭಿವೃದ್ಧಿ ಕಾಮಗಾರಿಯಲ್ಲಿ ಕೋಟ್ಯಂತರ ರೂ.ಭ್ರಷ್ಟಾಚಾರ
‘ನಿವೃತ್ತ ನ್ಯಾಯಾಧೀಶರಿಂದ ತನಿಖೆ’
ಬೆಂಗಳೂರು, ಎ.23: ನಗರದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳ ವೇಳೆ ನಡೆದಿರುವ ನೂರಾರು ಕೋಟಿ ರೂ.ಭ್ರಷ್ಟಾಚಾರ ಸಂಬಂಧ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲೇಶ್ವರಂ, ಗಾಂಧಿನಗರ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ನೀಡಿರುವ ಕಠಾರಿಯಾ ವರದಿ ಮತ್ತು ಸಿಐಡಿ ವರದಿಗಳನ್ನು ಆಧರಿಸಿ ನಿವೃತ್ತ ನ್ಯಾಯಾಧೀಶರು, ಲೋಕೋಪಯೋಗಿ ಇಲಾಖೆಯ ಮೂವರು ನಿವೃತ್ತ ಎಂಜಿನಿಯರ್‌ಗಳು ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಈ ವರದಿ ಆಧರಿಸಿ ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಜನತೆಯ ಅಭಿವೃದ್ಧಿ ದೃಷ್ಟಿಯಿಂದ ನಗರವನ್ನು ವಿಭಜಿಸಲು ಸರಕಾರ ಚಿಂತನೆ ನಡೆಸಿದೆ. ಈಗಾಗಲೇ ಎರಡೂ ಸದನಗಳಲ್ಲಿ ಈ ಬಗ್ಗೆ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲಾಗಿದೆ. ಅದನ್ನು ರಾಜ್ಯಪಾಲರು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ವರದಿ ಬಂದ ತಕ್ಷಣ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಬಿಎಂಪಿಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಬಜೆಟ್ ಮಂಡಿಸಿ ಅದಕ್ಕೆ ಅನುಮೋದನೆಯೂ ದೊರೆತಿದೆ. ಬಜೆಟ್ ಪೂರ್ವ ತಯಾರಿಯ ವೇಳೆ ಜೆಡಿಎಸ್ ಸದಸ್ಯರನ್ನು ಪರಿಗಣಿಸಿಲ್ಲ ಎಂದು ಶಾಸಕ ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅದನ್ನು ವ್ಯಕ್ತಪಡಿಸುವ ಅಧಿಕಾರ ಅವರಿಗಿದೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಕುಮಾರ್ ನಾಯಕ್ ಅವರ ವರ್ಗಾವಣೆಯನ್ನು ಸಮರ್ಥಿಸಿಕೊಂಡ ಸಚಿವರು, ಇದು ಆಡಳಿತಾತ್ಮಕ ನಿರ್ಧಾರ. ಆಡಳಿತದ ಅನುಕೂಲತೆಗಾಗಿ ಇಂತಹ ವರ್ಗಾವಣೆ ನಡೆಯುತ್ತದೆ. ವರ್ಗಾವಣೆಯ ಬಗ್ಗೆ ನಾಯಕ್‌ರಿಗೆ ಭಿನ್ನಾಭಿಪ್ರಾಯಗಳಿದ್ದರೆ ಪ್ರಶ್ನಿಸುವ ಅಧಿಕಾರ ಅವರಿಗಿದೆ ಎಂದು ಅವರು ತಿಳಿಸಿದರು.
ಅಧಿಕಾರ ಮತ್ತು ಸಿಬ್ಬಂದಿ ನೀಡಿದರೆ ಜಾಹೀರಾತಿನಿಂದ 300 ಕೋಟಿ ರೂ. ಆಧಾಯ ಸಂಗ್ರಹಿಸುವುದಾಗಿ ಬಿಬಿಎಂಪಿ ಅಧಿಕಾರಿ ಮಥಾಯ್ ನೀಡಿರುವ ಹೇಳಿಕೆ ಬಗ್ಗೆ ಸಚಿವರ ಗಮನ ಸೆಳೆದಾಗ, ಇದು ಬಿಬಿಎಂಪಿ ಆಯುಕ್ತರಿಗೆ ಬಿಟ್ಟ ವಿಚಾರ. ಈ ಬಗ್ಗೆ ತಮಗೆ ಯಾವ ಅಧಿಕಾರವೂ ಇಲ್ಲ ಎಂದು ಅವರು ಜಾರಿಕೊಂಡರು.
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಕಾರಣರಾಗಿದ್ದಾರೆ. ವೈಜ್ಞಾನಿಕ ಕಸ ವಿಲೇವಾರಿಗೆ ಆದ್ಯತೆ ನೀಡದೆ ಉದ್ಯಾನ ನಗರಿಯನ್ನು ಕಸದ ನಗರಿಯನ್ನಾಗಿ ಪರಿವರ್ತಿಸಿದರು. ಈಗ ಕಾಂಗ್ರೆಸ್ ಸರಕಾರದ ವಿರುದ್ಧ ಇಲ್ಲಸಲ್ಲದ್ದನ್ನು ಆರೋಪಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಯಾವ ಮಟ್ಟದಲ್ಲಿ ಬೇರು ಬಿಟ್ಟಿದೆ ಎಂಬುದು ಯಡಿಯೂರಪ್ಪರಿಗೆ ತಿಳಿದಿಲ್ಲ. ಕೇವಲ ಕನಸಿನ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.







