ಕುಡಿಯುವ ನೀರು-ಮೇವಿಗೆ ರಾಜ್ಯದ ಅನುದಾನ: ಸಿಎಂ
ಕಲಬುರಗಿ, ಎ.23: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಮತ್ತು ಜಾನುವಾರು ಮೇವಿಗೆ ಎಷ್ಟೇ ಹಣ ಖರ್ಚಾದರೂ ಮಳೆ ಬರುವವರೆಗೆ ರಾಜ್ಯ ಸರಕಾರದಿಂದಲೇ ಖರ್ಚು ಭರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರಕಾರದಿಂದ ಈ ಉದ್ದೇಶಕ್ಕೆ ಹಣ ಬಿಡುಗಡೆ ಮಾಡಲಿ ಅಥವಾ ಬಿಡುಗಡೆ ಮಾಡದೆ ಇರಲಿ. ಸದರಿ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರಕಾರವೇ ನೀಡುತ್ತದೆ ಎಂದರು.
ಕೇಂದ್ರ ಸರಕಾರವು ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಪರಿಹಾರಕ್ಕಾಗಿ 1,540 ಕೋಟಿ ರೂ.ಬಿಡುಗಡೆ ಮಾಡಿದ್ದು, ರೈತರ ಖಾತೆಗಳಿಗೆ ಜಮಾ ಮಾಡಿದೆ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಹಿಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ನಷ್ಟ ಪರಿಹಾರಕ್ಕಾಗಿ 1,416 ಕೋಟಿ ರೂ.ಮನವಿಯನ್ನು ಸಲ್ಲಿಸಲಾಗಿತ್ತು. ಈಗ ಕೇಂದ್ರ ಸರಕಾರ ಈ ಪೈಕಿ ಶೇ.50ರಷ್ಟು ಅಂದರೆ 723 ಕೋಟಿ ರೂ.ಬಿಡುಗಡೆ ಮಾಡಲು ತೀರ್ಮಾನ ಕೈಗೊಂಡಿದೆ ಎಂದು ಅವರು ಹೇಳಿದರು.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎರಡನೆ ಹಂತದ ಬರ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ದಿಲ್ಲಿಗೆ ಮೇ ತಿಂಗಳ ಮೊದಲನೆ ವಾರ ಭೇಟಿ ನೀಡಲಾಗುವುದು ಹಾಗೂ ಕುಡಿಯುವ ನೀರು ಮತ್ತು ಮೇವಿಗಾಗಿಯೂ ಹಣ ನೀಡುವಂತೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಗುಜರಾತ್ ರಾಜ್ಯದಲ್ಲಿ 1950ರಿಂದ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಯಲ್ಲಿದೆ. ಆದರೆ, ಈ ಸಂಪೂರ್ಣ ಮದ್ಯಪಾನ ನಿಷೇಧ ಯಾವ ರಾಜ್ಯದಲ್ಲಿಯೂ ಯಶಸ್ವಿಯಾಗುವ ನಂಬಿಕೆಯಿಲ್ಲ. ಈ ಕುರಿತು ರಾಷ್ಟ್ರಮಟ್ಟದಲ್ಲಿ ತೀರ್ಮಾನ ವಾಗಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಅಬಕಾರಿ ಇಲಾಖೆಯಿಂದ 16 ಸಾವಿರ ಕೋಟಿ ರೂ.ಆದಾಯ ಬರುತ್ತಿದೆ. ಎರಡನೆ ಮತ್ತು ಮೂರನೆ ಹಂತದ ರಾಜ್ಯ ಬರ ಅಧ್ಯಯನ ಪ್ರವಾಸ ಮುಗಿದ ಮೇಲೆ ಸಂಪುಟ ಪುನರ್‌ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ನಮ್ಮ ಸರಕಾರ ಟೇಕಾಫ್ ಆಗಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಟೇಕಾಫ್ ಆಗಲು ನಮ್ಮ ಸರಕಾರ ವಿಮಾನವಲ್ಲ. ನಾವು ನಡೆದುಕೊಂಡೆ ಮುನ್ನಡೆಯುತ್ತೇವೆ. ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಮುಂದುವರಿಯುತ್ತಿದ್ದೇವೆ. ವಿರೋಧಪಕ್ಷಗಳು ಇನ್ನಾದರೂ ಕಣ್ಣುತೆರೆದು ನೋಡಲಿ ಎಂದು ಅವರು ತಿರುಗೇಟು ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ್‌ಜಾಧವ್, ಶಾಸಕರಾದ ಡಾ.ಅಜಯ್‌ಸಿಂಗ್, ಪ್ರಿಯಾಂಕ ಖರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







