ಧೋನಿ ವಿರುದ್ಧ ಹರ್ಷ ಭೋಗ್ಲೆ ಟೀಕಾಸ್ತ್ರ

ಹೊಸದಿಲ್ಲಿ, ಎ.23: ಭಾರತದ ಆಟಗಾರರ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕಾಗಿ ಇತ್ತೀಚೆಗೆ ಐಪಿಎಲ್ ವೀಕ್ಷಕವಿವರಣೆ ತಂಡದಿಂದ ಉಚ್ಚಾಟಿಸಲ್ಪಟ್ಟಿರುವ ಹೊರತಾಗಿಯೂ ಹಿರಿಯ ವೀಕ್ಷಕವಿವರಣೆಗಾರ ಹರ್ಷ ಭೋಗ್ಲೆ ಭಾರತದ ನಾಯಕ ಎಂಎಸ್ ಧೋನಿಯನ್ನು ಮತ್ತೊಮ್ಮೆ ತೀವ್ರವಾಗಿ ಟೀಕಿಸಿದ್ದಾರೆ.
ಆರ್‌ಸಿಬಿ ವಿರುದ್ಧ ಪುಣೆಯಲ್ಲಿ ಶುಕ್ರವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಧೋನಿ ನಿಧಾನವಾಗಿ ಬ್ಯಾಟಿಂಗ್ ಮಾಡಿರುವುದಕ್ಕೆ ಭೋಗ್ಲೆ ಟೀಕಾಸ್ತ್ರ ಎಸೆದಿದ್ದಾರೆ. ಧೋನಿ ನೇತೃತ್ವದ ಪುಣೆ ಸೂಪರ್‌ಜೈಂಟ್ಸ್ ತಂಡ ಆರ್‌ಸಿಬಿ ವಿರುದ್ಧ ಸೋಲುವ ಮೂಲಕ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿತ್ತು. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿರುದ್ಧ ಧೋನಿ 38 ಎಸೆತಗಳಲ್ಲಿ 41 ರನ್ ಗಳಿಸಿ ಮಂದಗತಿಯ ಬ್ಯಾಟಿಂಗ್ ಮಾಡಿದ್ದರು.
38 ಎಸೆತಗಳ ಇನಿಂಗ್ಸ್‌ನಲ್ಲಿ ಕೇವಲ 3 ಬೌಂಡರಿ ಬಾರಿಸಿದ್ದ ಧೋನಿಯ ಬ್ಯಾಟಿಂಗ್‌ನ್ನು ಉಲ್ಲೇಖಿಸಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಭೋಗ್ಲೆ, 180ಕ್ಕೂ ಅಧಿಕ ರನ್ ಬೆನ್ನಟ್ಟುವಾಗ 41 ರನ್ ನಿಮಗೆ ಪಂದ್ಯವನ್ನು ಗೆಲ್ಲಿಸಿಕೊಡದು. ಹೆಚ್ಚಿನ ಬಾರಿ ಇದರಿಂದ ತಂಡಕ್ಕೆ ಯಾವುದೇ ಲಾಭವಿಲ್ಲ ಎಂದಿದ್ದಾರೆ.
ಭಾರತದ ವೀಕ್ಷಕವಿವರಣೆಗಾರರು ಭಾರತದ ಆಟಗಾರರನ್ನು ಟೀಕಿಸುವುದಕ್ಕೆ ಈ ಹಿಂದೆ ಟ್ವಿಟರ್‌ನಲ್ಲಿ ಭಾರೀ ಚರ್ಚೆ ನಡೆದಿತ್ತು. ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಭಾರತದ ವೀಕ್ಷಕವಿವರಣೆಗಾರರು ಪ್ರತಿ ಬಾರಿಯೂ ಭಾರತದ ಆಟಗಾರರನ್ನು ತೆಗಳುತ್ತಿರುವುದನ್ನು ಆಕ್ಷೇಪಿಸಿದ್ದರು. ಭೋಗ್ಲೆ ಭಾರತದ ಆಟಗಾರರನ್ನು ಸದಾ ಕಾಲ ಟೀಕಿಸುತ್ತಿದ್ದರು. ಅವರ ಈ ವರ್ತನೆಯೇ ಐಪಿಎಲ್ ಟೂರ್ನಿಯಿಂದ ಅವರನ್ನು ಹೊರದಬ್ಬಲು ಕಾರಣವಾಗಿದೆ ಎನ್ನಲಾಗಿದೆ.







