‘ವಿಕಾಸನ ಹೊಸ ಜಿಗಿತ’ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ
ಬೆಂಗಳೂರು, ಎ. 23: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಗರದ ಫ್ರೀಡಂ ಪಾರ್ಕ್‌ನಲ್ಲಿ ಎ. 24ರಿಂದ ಒಂದು ವಾರ ಕಾಲ ಆಯೋಜಿಸಿರುವ ‘ವಿಕಾಸನ ಹೊಸ ಜಿಗಿತ’ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ.
ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಪಿ.ಸಿ.ಮೋಹನ್, ಕೇಂದ್ರ ಸರಕಾರದ ಜನಪರ ಯೋಜನೆಗಳ ಮಹತ್ವ ಮತ್ತು ಅದರ ಉಪಯೋಗಗಳನ್ನು ತಿಳಿಯಲು ಛಾಯಾಚಿತ್ರ ಪ್ರದರ್ಶನ ಪೂರಕವಾಗಿದೆ. ಈ ಯೋಜನೆಗಳ ಸದುಪಯೋಗವನ್ನು ಜನರು ಪಡೆಯಬೇಕು ಎಂದು ಹೇಳಿದರು.
ಛಾಯಾಚಿತ್ರ ಪ್ರದರ್ಶನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ಹೋರಾಟ, ಶಿಕ್ಷಣ ಮತ್ತು ಸಾಧನೆಗಳ ಕುರಿತ ಛಾಯಾಚಿತ್ರಗಳು ಗಮನ ಸೆಳೆಯುತ್ತಿವೆ. ಅಲ್ಲದೆ ಕೇಂದ್ರ ಸರಕಾರ ನೂತನವಾಗಿ ಜಾರಿ ತಂದಿರುವ ಮುದ್ರಾ, ಜನದನ, ಅಟಲ್ ಪಿಂಚಣಿ, ಸ್ಟಾರ್ಟ್ ಅಪ್ ಯೋಜನೆಗಳಿಗೆ ಸಂಬಂಧಿಸಿದಂತೆ ಛಾಯಾಚಿತ್ರ ಪ್ರದರ್ಶನದ ಜೊತೆಗೆ ಮಾಹಿತಿಯನ್ನು ನೀಡಲಾಗುತ್ತಿದೆ.
ಉಚಿತ ಆಧಾರ್ ನೋಂದಣಿ: ಛಾಯಾಚಿತ್ರ ಪ್ರದರ್ಶನದಲ್ಲಿ ಉಚಿತ ಆಧಾರ್ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ಮಾಡಲು ಬಯಸುವ ಆಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದು.ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬ್ಯಾಂಕ್ ಕ್ಷೇತ್ರದಲ್ಲಿನ ಯೋಜನೆಗಳು, ಸಾಲದ ವ್ಯವಸ್ಥೆ ಕುರಿತು ಮಾಹಿತಿ ನೀಡಲು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಉಚಿತ ಕಣ್ಣಿನ ತಪಾಸಣೆ ಶಿಬಿರ: ನಗರದ ನಾರಾಯಣ ನೇತ್ರಾಲಯ ಸಹಯೋಗದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಇಂದಿನಿಂದ ಐದು ದಿನಗಳ ಕಾಲ ಆಯೋಜಿಸಲಾಗಿದೆ.







