ಅಮೆರಿಕದ ಮಿಸಿಸಿಪ್ಪಿ ರಸ್ತೆಗೆ ಭಾರತ ಮೂಲದ ಡಾ.ಸಂಪತ್ ಶಿವಾಂಗಿ ಹೆಸರು

ವಾಷಿಂಗ್ಟನ್, ಎ. 24: ಭಾರತ ಮೂಲದ ಅಮೆರಿಕನ್ ಪ್ರಜೆ ಡಾ. ಸಂಪತ್ ಶಿವಾಂಗಿ ಅವರು ಸಮುದಾಯಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಅಮೆರಿಕದ ಮಿಸಿಸಿಪ್ಪಿ ರಸ್ತೆಗೆ ಡಾ.ಸಂಪತ್ ಶಿವಾಂಗಿ ಲೇನ್ ಎಂದು ನಾಮಕರಣ ಮಾಡಲಾಗಿದೆ.
ಈ ರಾಜ್ಯದ ಗಣ್ಯ ರಿಪಬ್ಲಿಕನ್ ಮುಖಂಡನ ಗೌರವಾರ್ಥ ಈ ರಸ್ತೆಯ ಹೆಸರನ್ನು ನಿನ್ನೆ ಅಧಿಕೃತವಾಗಿ ನಾಮಕರಣ ಮಾಡಲಾಯಿತು. ಸ್ಟೇಟ್ ಗವರ್ನರ್ ಫಿಲ್ ಬ್ರಿಯಾಂಟ್ ಅವರು ಸಂಪತ್ ಅವರನ್ನು ಕಳೆದ ವಾರ ಮುಂದಿನ ಏಳು ವರ್ಷದ ಅವಧಿಗಾಗಿ ಮಿಸಿಸಿಪ್ಪಿ ಮಾನಸಿಕ ಆರೋಗ್ಯ ವಿಭಾಗಕ್ಕೆ ನೇಮಕ ಮಾಡಿದ್ದರು.
"ನಾನು ಹಲವು ವರ್ಷಗಳ ಹಿಂದೆ ನೇಮಕಗೊಂಡ ಬಳಿಕ ನನ್ನ ಮೇಲೆ ವಿಶ್ವಾಸ ಇರಿಸಿ, ಮಾನಸಿಕ ಆರೋಗ್ಯ ವಿಭಾಗದಲ್ಲಿ ಹಲವು ಬದಲಾವಣೆಗಳನ್ನು ತರಲು ಅವಕಾಶ ಮಾಡಿಕೊಟ್ಟ ಗವರ್ನರ್ ಅವರಿಗೆ ನಾವು ಆಭಾರಿಗಳು" ಎಂದು ಸಂಪತ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಾನಸಿಕ ಆರೋಗ್ಯ ವಿಭಾಗ ಮಿಸಿಸಿಪ್ಪಿ ಸರ್ಕಾರದ ಎರಡನೇ ಅತಿದೊಡ್ಡ ವಿಭಾಗವಾಗಿದೆ. ಮಾನಸಿಕ ಅಸ್ವಸ್ಥರು, ಬೌದ್ಧಿಕ ಅಭಿವೃದ್ಧಿ ವೈಕಲ್ಯ, ಮಾದಕವಸ್ತು ಹಾಗೂ ಆಲ್ಕೊಹಾಲ್ ವ್ಯಸನಿಗಳ ಸೇವೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ.
2014ರಲ್ಲಿ ಶಿವಾಂಗಿ ಅವರನ್ನು ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಈ ಹುದ್ದೆ ಏರಿದ ಮೊಟ್ಟಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
2005ರಿಂದ 2008ರ ವರೆಗೆ ಅವರು ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆ ವಿಭಾಗದ ಕಾರ್ಯದರ್ಶಿಯಾಗಿ ಸಏವೆ ಸಲ್ಲಿಸಿದ್ದರು. ಅಮೆರಿಕನ್ ಅಸೋಸಿಯೇಶನ್ ಆಫ್ ಫಿಜೀಶಿಯನ್ಸ್ ಆಫ್ ಇಂಡಿಯನ್ ಒರಿಜಿನ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ಮತ್ತು ಇಂಡಿಯಾ ಅಸೋಸಿಯೇಶನ್ ಆಫ್ ಮಿಸಿಸಿಪ್ಪಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.







