ದಾಳಿ ಮಾಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ಓಡಿಸಿಕೊಂಡು ಹೋಗಿ ಥಳಿಸಿದರು!

ರಿವಾ, ಎಪ್ರಿಲ್ 24: ಜಿಲ್ಲೆಯ ಮಹಾಗಂಜ್ ಕಸ್ಬಾದ ಒಂದು ಅಂಗಡಿಗೆ ದಾಳಿ ಮಾಡಿದ ವಾಣಿಜ್ಯ ತೆರಿಗೆ ವಿಭಾಗದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಹಲ್ಲೆಯಲ್ಲಿ ಉಪಾಯುಕ್ತರ ಸಹಿತ ಎಂಟು ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಈ ಪ್ರಕರಣದ ತನಿಖೆಯನ್ನು ವಹಿಸಲಾಗಿದೆ. ಸಾತ್ನಾ ಸೆಲ್ ವಾಣಿಜ್ಯ ತೆರಿಗೆ ತಂಡ ಶನಿವಾರ ಮಧ್ಯಾಹ್ನ ಮಹಾಗಂಜ್‌ನ ಶಿವ ಸಾರಿ ಸೆಂಟರ್‌ನಲ್ಲಿ ಕಾರ್ಯಾಚರಣೆಗಾಗಿ ಬಂದಿದ್ದರು. ಈ ತಂಡ ಅಂಗಡಿಗೆ ತಲುಪುತ್ತಿದ್ದಂತೆ ಸುತ್ತಮುತ್ತಲಿನ ವ್ಯಾಪಾರಿಗಳು ಮತ್ತು ಇತರರು ಭಾರೀ ಸಂಖ್ಯೆಯಲ್ಲಿ ನೆರೆದರಲ್ಲದೆ ಅಧಿಕಾರಿಗಳನ್ನು ಅಟ್ಟಾಡಿಸಿ ಥಳಿಸಿದರು ಎಂದು ವರದಿಗಳು ತಿಳಿಸಿವೆ. ವಾಣಿಜ್ಯಿ ತೆರಿಗೆ ವಿಭಾಗದ ಅಧಿಕಾರಿ ಹಾಗೂ ನೌಕರರು ಜೀವ ಉಳಿಸಿಕೊಳ್ಳಲಿಕ್ಕಾಗಿ ಓಡಿದಾಗ ಅವರನ್ನು ಗುಂಪು ಅಟ್ಟಿಸಿ ಕೊಂಡು ಹೋಗಿ ಹೊಡೆದಿದೆ. ಈ ಘಟನೆಯಲ್ಲಿ ಉಪಾಯುಕ್ತ ಸಹಿತ ಎಲ್ಲ ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳೆಲ್ಲ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಶಿವ ಸಾರಿ ಸೆಂಟರ್‌ನ ಮೂವರ ಸಹಿತ ಇತರ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.





