ತೆಂಕಮಿಜಾರಿನಲ್ಲಿ ನೂತನ ಮಾದರಿಯಲ್ಲಿ "ಪಂಚಾಯತ್ ರಾಜ್ ದಿವಸ" ಆಚರಣೆ
ಅಶ್ವತ್ಥಪುರ ಅಂಗನವಾಡಿ ಕೇಂದ್ರಕ್ಕೆ ಪ್ರಶಸ್ತಿ ಪ್ರದಾನ

ಮೂಡುಬಿದಿರೆ : ಕೇಂದ್ರ ಸರಕಾರದ ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನದಡಿ ತೆಂಕಮಿಜಾರು ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ಶನಿವಾರ ನಡೆದ "ಪಂಚಾಯತ್ ರಾಜ್ ದಿವಸ"ದಂಗವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರ ಅಂಗನವಾಡಿ ಕೇಂದ್ರಕ್ಕೆ ಉತ್ತಮ ಅಂಗನವಾಡಿ ಕೇಂದ್ರವೆಂದು ಗುರುತಿಸಿ ಪ್ರಶಸ್ತಿಯನ್ನು ನೀಡುವ ಮೂಲಕ ನೂತನ ಮಾದರಿಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಶೇಷ ಗ್ರಾಮಸಭೆಯಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾ.ಪಂಚಾಯತ್ ಒಂದು ಅಂಗನವಾಡಿ ಕೇಂದ್ರಗಳ ಕಾರ್ಯವೈಖರಿ, ಗುಣಮಟ್ಟ ಸೇರಿದಂತೆ ಒಟ್ಟು 10 ಅಂಕಗಳ ಸಮೀಕ್ಷೆಯನ್ನು ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.
ಎಸ್‌ಸಿ, ಎಸ್‌ಟಿಯವರಿಗೆ ನೀಡುವ ಸವಲತ್ತುಗಳ ಸೌಲಭ್ಯವನ್ನು ಇತರ ಬಡಜನರಿಗೂ ನೀಡಿ : ಗ್ರಾ.ಪಂ ವ್ಯಾಪ್ತಿಯಲ್ಲಿ ಎಸ್‌ಸಿ ಎಸ್‌ಟಿಗಳಲ್ಲದೆ ಇತರ ಜಾತಿ ವರ್ಗದಲ್ಲಿಯೂ ತೀರ ಬಡಜನರಿದ್ದು ಅವರಿಗೆ ಭೂಮಿ ಇದ್ದರೂ ಕೃಷಿ ಮಾಡಲು ನೀರಿನ ಸಮಸ್ಯೆಗಳು ಸಹಿತ ಇತರ ತೊಂದರೆಗಳು ಇರುತ್ತವೆ ಆದ್ದರಿಂದ ಅವರಿಗೂ ಎಸ್‌ಸಿ, ಎಸ್‌ಟಿಗಳಿಗೆ ನೀಡುವ ಸವಲತ್ತುಗಳನ್ನು ನೀಡುವಂತೆ ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ಮುತ್ತು ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ ಅವರಲ್ಲಿ ಆಗ್ರಹಿಸಿದರು. ಎಸ್.ಸಿ, ಎಸ್.ಟಿಯವರಿಗೆ ಸಿಗುವಂತಹ ಸವಲತ್ತುಗಳನ್ನು ಇತರ ವರ್ಗದವರಿಗೆ ನೀಡಲು ಅವಕಾಶವಿಲ್ಲ ಆದರೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ಅಂತಹವರಿಗೆ ಕೆಲವು ಸವಲತ್ತುಗಳನ್ನು ಒದಗಿಸಲು ಅವಕಾಶವಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಮೆಸ್ಕಾಂ ಬಿಲ್‌ಗಳು ಬರುತ್ತಿದ್ದು ಇದನ್ನು ಪಾವತಿಸಲು ಕಷ್ಟ ಸಾಧ್ಯವಾಗುತ್ತಿದೆ ಎಂದು ಅಶ್ವತ್ಥಪುರ ಅಂಗನವಾಡಿ ಕೇಂದ್ರದ ಸುಮತಿ ಅವರು ಸಭೆಯ ಗಮನಕ್ಕೆ ತಂದಾಗ, ಅಂಗನವಾಡಿ ಕೇಂದ್ರಗಳಿಗೆ ಸೋಲಾರ್ ಲೈಟ್‌ಗಳನ್ನು ಅಳವಡಿಸುವ ಬಗ್ಗೆ ಚಿಂತನೆಗಳು ನಡೆಯುತ್ತಿದ್ದು ಸೋಲಾರ್‌ನ ವ್ಯವಸ್ಥೆಗಳಾದರೆ ವಿದ್ಯುತ್ ಬಿಲ್‌ನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಿಇಓ ತಿಳಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಂತರ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಮಾಲೆಯನ್ನು ಹಾಕಲಾಯಿತು.
ಅಂಡಾರು ಗುಣಪಾಲ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಪ್ರಕಾಶ್ ಗೌಡ ಉಪಸ್ಥಿತರಿದ್ದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಪುತ್ತಿಗೆ ವಲಯದ ಮೇಲ್ವೀಚಾರಕಿ ಭಾರತಿ, ನೀರ್ಕೆರೆ ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ವೈದ್ಯೆ ಪ್ರಜ್ಞಾ ಆಳ್ವ, ಆಳ್ವಾಸ್ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ನಾಗೇಂದ್ರ ಹಾಗೂ ಆರೋಗ್ಯ ಕಾರ್ಯಕರ್ತೆಯರು ತಮ್ಮ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ತೆಂಕಮಿಜಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 10 ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ ಉತ್ತಮ ಅಂಗನವಾಡಿಗಾಗಿ ಸಮೀಕ್ಷೆ ನಡೆಸಿ ಅಂಕಗಳನ್ನು ನೀಡಿ ಉತ್ತಮ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ. ಈ ಪ್ರಕ್ರಿಯೆ ಪ್ರತಿ ವರ್ಷವೂ ಮುಂದುವರೆಯಲಿದೆ. ಪಂಚಾಯತ್ ರಾಜ್ ದಿವಸದ ಕಾರ್ಯಕ್ರಮದಂಗವಾಗಿ ಕಳೆದೆರಡು ವಾರಗಳಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಂಚಾಯತ್ ಸಿಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಾರ್ಷಿಕ ವರದಿಗಳನ್ನು ಮಂಡಿಸಿದರು. ಬಂಗಬೆಟ್ಟು ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಅವರು ಪಂಚಾಯತ್ ಮತ್ತು ಶಾಲೆಗಿಉವ ನಿಕಟ ಸಂಪರ್ಕದ ಬಗ್ಗೆ ಹಾಗೂ ಶಾಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸಿಬಂದಿ ಸತೀಶ ಎಸ್‌ಸಿ, ಎಸ್‌ಟಿ ಕ್ರಿಯಾಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.







