ಭಾರತದ ಸಂಸದ ವಿಜಯ ಮಲ್ಯ ಇಂಗ್ಲೆಂಡ್ ನ ಮತದಾರ !
108 ಕೋಟಿ ರೂ. ಬೆಲೆಯ ಬಂಗಲೆಯಲ್ಲಿ ವಾಸಿಸುತ್ತಿರುವ ಮಾಜಿ ಮದ್ಯ ದೊರೆ

ಲಂಡನ್, ಎ. 24: ಭಾರತೀಯ ಬ್ಯಾಂಕ್‌ಗಳಿಗೆ 9,400 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಂಚಿಸಿ ಬ್ರಿಟನ್‌ಗೆ ಪಲಾಯನ ಮಾಡಿರುವ ಮಾಜಿ ಉದ್ಯಮಿ ವಿಜಯ ಮಲ್ಯರ ಹೆಸರು ಬ್ರಿಟನ್‌ನ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ಮಾಧ್ಯಮ ವರದಿಯೊಂದು ರವಿವಾರ ಹೇಳಿದೆ.
60 ವರ್ಷ ಪ್ರಾಯದ ಮಾಜಿ ಮದ್ಯ ದೊರೆ ಉತ್ತರ ಲಂಡನ್‌ನಿಂದ ಒಂದು ಗಂಟೆ ರಸ್ತೆ ಪ್ರಯಾಣವಿರುವ ಹರ್ಟ್‌ಫೋರ್ಡ್‌ಶಯರ್‌ನ ಟೆವಿನ್ ಎಂಬ ಗ್ರಾಮದಲ್ಲಿ ‘ಲೇಡಿವಾಕ್’ ಎಂಬ ಮೂರು ಅಂತಸ್ತಿನ ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಅವರ ಇದೇ ವಿಳಾಸ ಮತದಾರರ ಪಟ್ಟಿಯಲ್ಲಿ ದಾಖಲಾಗಿದೆ.
‘‘ಬ್ರಿಟನ್‌ನಲ್ಲಿ ನನ್ನ ಅಧಿಕೃತ ವಿಳಾಸ ಲೇಡಿವಾಕ್’’ ಎಂಬುದಾಗಿ ಮಲ್ಯ ಖಚಿತಪಡಿಸಿದ್ದಾರೆ ಎಂದು ‘ದ ಸಂಡೇ ಟೈಮ್ಸ್’ ವರದಿ ಮಾಡಿದೆ. ಇದೇ ವಿಳಾಸವನ್ನು ತಾನು ಭಾರತೀಯ ಅಧಿಕಾರಿಗಳಿಗೆ ನೀಡಿರುವುದಾಗಿಯೂ ಅವರು ಹೇಳಿದ್ದಾರೆ ಎಂದು ಪತ್ರಿಕೆ ಹೇಳಿದೆ.
1.15 ಕೋಟಿ ಪೌಂಡ್ (ಸುಮಾರು 108 ಕೋಟಿ ರೂಪಾಯಿ) ಬೆಲೆಯ ಬಂಗಲೆಯನ್ನು ವಿದೇಶಗಳೊಂದಿಗೆ ಸಂಪರ್ಕವಿರುವ ಕಂಪೆನಿಯೊಂದು ಬ್ರಿಟಿಶ್ ಫಾರ್ಮುಲಾ ವನ್ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ರ ತಂದೆಯಿಂದ ಖರೀದಿಸಿತ್ತು.
‘‘ಲೇಡಿವಾಕ್‌ನ ಮಾಲೀಕತ್ವ ಸರಣಿ ಕಾನೂನುಬದ್ಧವಾಗಿದೆ’’ ಎಂದು ಮಲ್ಯ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ತನ್ನ ಮನೆಯ ವಿಚಾರದಲ್ಲಿ ‘‘ಏನನ್ನೂ ಅಡಗಿಸಲಾಗಿಲ್ಲ ಅಥವಾ ತೆರಿಗೆ ತಪ್ಪಿಸಲಾಗಿಲ್ಲ ಎಂದು ಮಲ್ಯ ಪತ್ರಿಕೆಗೆ ಹೇಳಿದ್ದಾರೆ. ಅದೂ ಅಲ್ಲದೆ, 1992ರಿಂದಲೂ ತಾನು ಬ್ರಿಟನ್ ನಿವಾಸಿ ಎಂದೂ ಹೇಳಿಕೊಂಡಿದ್ದಾರೆ.
ಆದರೆ, ಮನೆಯ ಮಾಲೀಕತ್ವ ದಾಖಲೆಗಳಲ್ಲಿ ಎಲ್ಲೂ ಮಲ್ಯರ ಹೆಸರಿಲ್ಲ. ಕೆರಿಬಿಯನ್‌ನ ತೆರಿಗೆ ವಂಚಕರ ಸ್ವರ್ಗಗಳಾದ ಸೇಂಟ್ ಕಿಟ್ಸ್ ಮತ್ತು ನೆವಿಸ್ ಎಂಬ ದೇಶಗಳಲ್ಲಿ ಎರಡು ಕಂಪೆನಿಗಳ ಹೆಸರುಗಳಲ್ಲಿ ಅದರ ಮಾಲೀಕತ್ವ ದಾಖಲಾಗಿದೆ.







