ಕನ್ಹಯ್ಯಗೆ ‘ದೇಶವಿರೋಧಿ’ಪಟ್ಟ ಕಟ್ಟಿದ್ದು ತಪ್ಪು: ಶಿವಸೇನೆ

ನಾಸಿಕ್,ಎ.24: ಸರಕಾರವು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗೆ ‘ದೇಶವಿರೋಧಿ’ಯ ಪಟ್ಟ ಕಟ್ಟಿರುವುದು ತಪ್ಪು ಎಂದು ಶಿವಸೇನೆಯ ಅಧ್ಯಕ್ಷ ಉದ್ಧವ ಠಾಕ್ರೆ ಅವರು ರವಿವಾರ ಇಲ್ಲಿ ಹೇಳಿದರು.
ಮೊದಲಿಗೆ,ಕನ್ಹಯ್ಯ ಕುಮಾರ್‌ಗೆ ಜನ್ಮ ನೀಡಿದವರು ಯಾರು? ಸರಕಾರವು ಈ ಬಗ್ಗೆ ಚಿಂತನೆ ನಡೆಸಬೇಕು.ಅವರಿಗೆ ತಪ್ಪಾಗಿ ದೇಶವಿರೋಧಿಯ ಪಟ್ಟವನ್ನು ಕಟ್ಟಲಾಗಿದೆ ಎಂದು ಇಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ ಠಾಕ್ರೆ, ಯುವಜನರಿಗೆ ಈ ರೀತಿ ದೇಶ ವಿರೋಧಿ ಪಟ್ಟವನ್ನು ಕಟ್ಟುತ್ತಿದ್ದರೆ ಅವರು ರಾಷ್ಟ್ರಕ್ಕಾಗಿ ಮುಕ್ತವಾಗಿ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಬಿಜೆಪಿಯು ಅವರ ಬೆಂಬಲವನ್ನು ಕಳೆದುಕೊಳ್ಳುತ್ತದೆ ಎಂದರು.
ನಮ್ಮ ದೇಶದಲ್ಲಿ ಯುವಜನರು ಬೃಹತ್ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಸರಕಾರವು ಎಚ್ಚರಿಕೆ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಬೆಳಿಗ್ಗೆ ಮುಂಬೈ-ಪುಣೆ ಜೆಟ್ ವಿಮಾನದಲ್ಲಿ ಸಹ ಪ್ರಯಾಣಿಕನೋರ್ವ ತನ್ನನ್ನು ಉಸಿರುಗಟ್ಟಿಸಲು ಪ್ರಯತ್ನಿಸಿದ್ದ ಎಂದು ಕನ್ಹಯ್ಯಿ ಕುಮಾರ ಆರೋಪಿಸಿದ ಬೆನ್ನಿಗೇ ಠಾಕ್ರೆಯವರ ಈ ಹೇಳಿಕೆ ಹೊರಬಿದ್ದಿದೆ.
ಕನ್ಹಯ್ಯ ಮತ್ತು ಸಹಪ್ರಯಾಣಿಕ ಕೋಲ್ಕತಾದ ಮಾನಸ್ ಡಿಜೆ ಇಬ್ಬರನ್ನೂ ವಿಮಾನದಿಂದ ಕೆಳಕ್ಕಿಳಿಸಲಾಗಿತ್ತು.ಘಟನೆಯು ವಾಸ್ತವದಲ್ಲಿ ತಳ್ಳಾಟವಾಗಿತ್ತು ಮತ್ತು ಸುಮಾರು ಎಂಟು ಜನರು ಇದರಲ್ಲಿ ಭಾಗಿಯಾಗಿದ್ದರು. ಕನ್ಹಯ್ಯಾ ಕುಮಾರ್ ಅವರ ಹೇಳಿಕೆ ಉತ್ಪ್ರೇಕ್ಷೆಯದಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ದೇವೆನ್ ಭಾರತಿ ತಿಳಿಸಿದರು.
ದೂರು ಸಲ್ಲಿಸುವಂತೆ ಕುಮಾರ್‌ಗೆ ತಿಳಿಸಿದಾಗ ಅವರು ನಿರಾಕರಿಸಿದ್ದರು ಮತ್ತು ಅವರ ಸ್ನೇಹಿತ ತನ್ನ ದೂರಿನಲ್ಲಿ ತಿಳಿಸಿರುವ ವಿಷಯವು ಸುಳ್ಳಾಗಿದೆ ಎಂದರು. ತನ್ಮಧ್ಯೆ ಮಹಾರಾಷ್ಟ್ರದ ಸಹಾಯಕ ಗೃಹ ಸಚಿವ ರಾಮ ಶಿಂಧೆ ಅವರು,ಕನ್ಹಯ್ಯೆ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಕನ್ಹಯ್ಯೆಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.







