ಅನಕ್ಷರತೆ, ವೌಢ್ಯ ಸಮಾಜದ ವ್ಯವಸ್ಥೆಗೆ ಕಂಟಕ: ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ

ಶಿವಮೊಗ್ಗ, ಎ. 24: ಅನಕ್ಷರತೆ ಮತ್ತು ವೌಢ್ಯ ಈ ದೇಶಕ್ಕೆ ಅಂಟಿದ ಜಾಢ್ಯ ಮತ್ತು ಶಾಪ. ಅದನ್ನು ತೊಡೆದು ಹಾಕದಿದ್ದರೆ ಭವಿಷ್ಯದಲ್ಲಿ ಇಡೀ ವ್ಯವಸ್ಥೆಗೆ ಕಂಟಕ ಎದುರಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಾಲೆಯಿಂದ ಹೊರ ಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಜನಾಂದೋಲನ ‘ಶಾಲೆ ಕಡೆ ನನ್ನ ನಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಿತರು ಅಹಂಕಾರ ತೋರದೇ ತಾವು ಪಡೆದ ಜ್ಞಾನ ವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾವಂತರು ತಮ್ಮ ಜ್ಞಾನವನ್ನು ಸಮಾಜದ ಉನ್ನತಿಗೆ ಪೂರಕವಾಗಿ ಬಳಸದಿದ್ದರೆ ಅಂತಹ ಶಿಕ್ಷಣ ವ್ಯರ್ಥ ಎಂದವರು ನುಡಿದರು.
ಸಮಾಜದ ಎಲ್ಲಾ ಮಕ್ಕಳು ಶಾಲೆಗೆ ದಾಖಲಾತಿ ನಿರಂತರವಾಗಿ ಶಾಲೆ ಕಡೆಗೆ ಹೆಜ್ಜೆಹಾಕುವಂತಾದರೆ ಸಂವಿಧಾನದತ್ತವಾಗಿ ನೀಡಲಾದ ಹಕ್ಕುಗಳನ್ನು ಅನುಭ ವಿಸಲು ಸಾಧ್ಯ ಎಂದ ಅವರು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಗೆ ಆಕರ್ಷಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ.ಅಲ್ಲದೆ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಬಟ್ಟೆ, ಪಠ್ಯಪುಸ್ತಕ, ಶೂ ಮುಂತಾದವುಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಆದರೂ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಕ್ಕೂ ಹೆಚ್ಚಾಗಿರುವುದು ಬೇಸರ ತಂದಿದೆ ಎಂದವರು ನುಡಿದರು.
ಪ್ರಸ್ತುತ ಸಂದರ್ಭದಲ್ಲಿ ಶೇ.23ರಷ್ಟು ಅನಕ್ಷರಸ್ಥರು ಇದ್ದಾರೆ. ಅವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ ಎಂದರು.
ಮಕ್ಕಳು ಶಾಲೆಗೆ ಪೂರ್ಣಪ್ರಮಾಣದಲ್ಲಿ ದಾಖಲಾ ಗದಿರಲು ಕಾರಣಗಳು ಅನೇಕ. ಕೆಲಸವನ್ನರಸಿ ವಲಸೆ ಹೋಗುವ ಕುಟುಂಬಗಳು, ಬಡತನ, ಮುಂತಾದ ಕಾರಣ ಗಳಲ್ಲದೆ ಮಗುವಿನ ಬುದ್ಧಿಮಾಂದ್ಯತೆ, ಅಂಗವೈಕಲ್ಯವೂ ಕೂಡ ಕಾರಣವಿರಬಹುದು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅನೇಕ ಕಾರ್ಯಕ್ರಮಗಳ ಮೂಲಕ ಶಿಕ್ಷಣ, ಆರೋಗ್ಯಕ್ಕಾಗಿ ಸರಕಾರವು ಸಾಕಷ್ಟು ಧನವಿನಿಯೋಗ ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಕೆ.ಸಿ.ಬಸವರಾಜು ಮಾತನಾಡಿ, ಈವರೆಗೆ ಶಾಲೆಗೆ ದಾಖಲಾಗದಿರುವ ಮಕ್ಕಳನ್ನು ಗುರುತಿಸಿ, ಸಕಾಲದಲ್ಲಿ ಶಾಲೆಗೆ ದಾಖಲಿಸಲು ಎಲ್ಲರೂ ಮುಂದಾಗಬೇಕು. ಪ್ರತಿ ಮಗುವು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿಯುವಂತಾಗಲು ಶಿಕ್ಷಣ ಪಡೆಯುವುದು ಅಗತ್ಯ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಕೆ.ರಾಕೇಶ್‌ಕುಮಾರ್, ನಿರೂಪಣಾಧಿಕಾರಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಸ್ವಾಮಿ ಅವರು ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ನಾರಾಯಣಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.







