ಗ್ರಾಪಂ ಸಭೆಗಳಲ್ಲಿ ಗ್ರಾಮಸ್ಥರು ತಪ್ಪದೆ ಪಾಲ್ಗೊಳ್ಳಬೇಕು: ತಾಪಂ ಸದಸ್ಯ ಮಲ್ಲಿಕಾರ್ಜುನ ರೆಡ್ಡಿ
ಶಿಕಾರಿಪುರ,ಎ.24: ಗ್ರಾಮಸ್ಥರು ಗ್ರಾಪಂ ಸಭೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕುಂದುಕೊರತೆ, ಸಮಸ್ಯೆಗಳ ಬಗ್ಗೆ ಗಮನ ಸೆಳೆದಲ್ಲಿ ಮಾತ್ರ ಸರಕಾರದ ಸೌಲಭ್ಯವನ್ನು ಪಡೆಯಬಹುದು ಇದರಿಂದ ಸರಕಾರದ ಯೋಜನೆಗಳು ಸಾರ್ಥಕವಾಗಲು ಸಾಧ್ಯ ಎಂದು ತಾಪಂ ಸದಸ್ಯ ಮಲ್ಲಿಕಾರ್ಜುನ ರೆಡ್ಡಿ ತಿಳಿಸಿದ್ದಾರೆ.
ರವಿವಾರ ತಾಲೂಕಿನ ಸಾಲೂರು ಗ್ರಾಪಂ ಆವರಣದಲ್ಲಿ ನಡೆದ ‘ನಮ್ಮ ಗ್ರಾಮ ನಮ್ಮ ಯೋಜನೆ’ ಹಾಗೂ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮದ ಕಟ್ಟಕಡೆಯ ವ್ಯಕ್ತಿ ಸರಕಾರದ ಸೌಲಭ್ಯದಿಂದ ವಂಚಿತವಾಗದಂತೆ ಗ್ರಾಮ ಸಭೆಯಲ್ಲಿ ಅರ್ಹರನ್ನು ಆಯ್ಕೆಗೊಳಿಸುವ ಹಾಗೂ ಸಮುದಾಯದ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸುವ ದಿಸೆಯಲ್ಲಿ ಗ್ರಾಮಸ್ಥರ ಸಲಹೆ ಸಹಕಾರಕ್ಕಾಗಿ ಸರಕಾರ ಇದೀಗ ‘ನಮ್ಮ ಗ್ರಾಮ ನಮ್ಮ ಯೋಜನೆ’ ಮೂಲಕ ಪಾರದರ್ಶಕ ಆಯ್ಕೆಗೆ ಹೊಸ ಪದ್ಧತಿಯನ್ನು ಜಾರಿಗೊಳಿಸಿದೆ ಎಂದ ಅವರು, ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಲ್ಲಿ ಸರಕಾರದ ಸೌಲಭ್ಯ ಅರ್ಹರಿಗೆ ಹಾಗೂ ಸಮುದಾಯಕ್ಕೆ ಸೂಕ್ತ ರೀತಿಯಲ್ಲಿ ತಲುಪಿಸಲು ಸಾಧ್ಯ ಎಂದು ತಿಳಿಸಿದರು.
ಸಾಲೂರು ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರದ ಯೋಜನೆಗಳು ಅರ್ಹರಿಗೆ ದೊರಕಿಸುವಲ್ಲಿ ಸರ್ವ ರೀತಿಯಲ್ಲಿ ಶ್ರಮಿಸುವುದಾಗಿ ತಿಳಿಸಿ ತಾಪಂ ಮೂಲಕ ಹೆಚ್ಚು ಅನುದಾನಕ್ಕೆ ಶ್ರಮಿಸುವುದಾಗಿ ಹೇಳಿದರು.
ಶಿಕಾರಿಪುರದ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹಾಗೂ ನೋಡಲ್ ಅಧಿಕಾರಿ ರವೀಂದ್ರ ನಾಯ್ಕ ಮಾತನಾಡಿ, ಪ್ರಧಾನಮಂತ್ರಿ ರಾಷ್ಟ್ರೀಯ ಯೋಜನೆ, ಗಾ ್ರಪಂ ನಮ್ಮ ಗ್ರಾಮ ನಮ್ಮ ಯೋಜನೆ ಮೂಲಕ 5 ವರ್ಷದ ಪಂಚವಾರ್ಷಿಕ ಕ್ರಿಯಾಯೋಜನೆ,ಕಾರ್ಯಕ್ರಮದ ರೂಪು ರೇಷೆಯನ್ನು ಗ್ರಾಪಂನಿಂದ ತಾಪಂ, ಜಿಪಂ, ರಾಜ್ಯ , ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ ಅವರು, ಗ್ರಾಮದ ಶಿಕ್ಷಣ,ಆರೋಗ್ಯ,ಅರಣ್ಯ ಎಲ್ಲಾ ಇಲಾಖೆಯ ಯೋಜನೆಯನ್ನು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ನಿಧರ್ರಿಸಿ ಸಲ್ಲಿಸಬೇಕಾಗುತ್ತದೆ ಎಂದರು.
ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶಿವಕುಮಾರ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಕೇಶವ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿನ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವುದಾಗಿ ತಿಳಿಸಿ ವ್ಯಾಪ್ತಿ ಮೀರಿದ ಬೇಡಿಕೆಯನ್ನು ತಾಪಂ, ಜಿಪಂಗೆ ಕಳುಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ವಿದ್ಯಾರ್ಥಿನಿಯರಿಂದ ನಡೆದ ಹಾಲಕ್ಕಿ ಕುಣಿತ ಎಲ್ಲರ ಗಮನ ಸೆಳೆಯಿತು. ಬೆಂಗಳೂರಿನ ದ.ಹಂಗರ್ ಪ್ರಾಜೆಕ್ಟ್‌ಅಧಿಕಾರಿ ಸೋಮಶೇಖರ್ ನಮ್ಮ ಗ್ರಾಮ,ನಮ್ಮ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಹಾಗೂ ತಾ.ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ,ಗ್ರಾಪಂ ಸದಸ್ಯ ಚನ್ನಾನಾಯ್ಕ,ಮಲ್ಲಿಕಾರ್ಜು ನ,ರಮೇಶ ಚಕ್ಕಡಿ,ನರಸಿಂಹಪ್ಪ, ಸಲೀಮಾಬಿ,ಮಂಜುಳಮ್ಮ,ರೇಣುಕಮ್ಮ,ರಾಜು,ಸುರೇಶ ಶೆಟ್ಟಿ ಸುಗ್ರಾಮ ಯೋಜನೆಯ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.







