ಒಲಿಂಪಿಕ್ಸ್‌ಗೆ ಸಲ್ಮಾನ್ ಖಾನ್ ರಾಯಭಾರಿ: ಮಿಲ್ಕಾ ಸಿಂಗ್ ಆಕ್ಷೇಪ

ಹೊಸದಿಲ್ಲಿ, ಎ.24:ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತದ ರಾಯಭಾರಿ ಆಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಆಯ್ಕೆ ಮಾಡಿರುವುದಕ್ಕೆ ಸ್ಟಾರ್ ಕುಸ್ತಿಪಟು ಯೋಗೇಶ್ವರ್ ದತ್ತ್ ಹಾಗೂ ಮಾಜಿ ಓಟಗಾರ ಮಿಲ್ಕಾ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ಸ್‌ನ ರಾಯಭಾರಿ ಆಗಿ ಕ್ರೀಡಾಳುವನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ದತ್ತ್ ಹಾಗೂ ಸಿಂಗ್ ಆಗ್ರಹಿಸಿದ್ದಾರೆ.
ಮುಂಬರುವ ಬಾಲಿವುಡ್ ಚಿತ್ರ ಸುಲ್ತಾನ್‌ನಲ್ಲಿ ಸಲ್ಮಾನ್ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಲಿಂಪಿಕ್ಸ್ ಸಂಸ್ಥೆಯು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸ್ಟಾರ್ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್, ಹಾಕಿ ನಾಯಕ ಸರ್ದಾರ್ ಸಿಂಗ್ ಹಾಗೂ ಶೂಟರ್ ಅಪೂರ್ವಿ ಚಾಂಡೇಲಾರ ಸಮ್ಮುಖದಲ್ಲಿ ಸಲ್ಮಾನ್‌ರನ್ನು ಒಲಿಂಪಿಕ್ಸ್ ರಾಯಭಾರಿ ಆಗಿ ಆಯ್ಕೆ ಮಾಡಿತ್ತು.
ಭಾರತದಲ್ಲಿ ತಮ್ಮ ಸಿನೆಮಾಗಳನ್ನು ಪ್ರಚಾರ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ, ಸಿನೆಮಾಗಳನ್ನು ಪ್ರಚಾರ ಮಾಡಲು ಒಲಿಂಪಿಕ್ಸ್ ಒಂದು ವೇದಿಕೆಯಲ್ಲ. ರಾಯಭಾರಿ ಪಾತ್ರವೇನು? ಏಕೆ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ?. ದೇಶಕ್ಕೆ ಪದಕಗಳ ಅಗತ್ಯವಿದೆಯೇ ಹೊರತು ಪ್ರಾಯೋಜಕರಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ.
ಒಲಿಂಪಿಕ್ಸ್ ರಾಯಭಾರಿ ಆಗಿ ಕ್ರೀಡಾಳುವನ್ನು ಆಯ್ಕೆ ಮಾಡಿದರೆ ಉತ್ತಮವಾಗುತ್ತಿತ್ತು ಎಂದು ಹೇಳಿದ ಓಟದ ದಂತಕತೆ ಮಿಲ್ಖಾ ಸಿಂಗ್,‘‘ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ಶೂಟಿಂಗ್, ಅಥ್ಲೆಟಿಕ್ಸ್, ವಾಲಿಬಾಲ್ ಅಥವಾ ಇತರ ಕ್ರೀಡೆಗಳ ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ನ ರಾಯಭಾರಿ ಆಗಿ ಆಯ್ಕೆ ಮಾಡಬೇಕಾಗಿತ್ತು. ನಮ್ಮ ದೇಶದಲ್ಲಿ ಪಿ.ಟಿ. ಉಷಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ಅಜಿತ್ ಪಾಲ್ ಸಹಿತ ಹಲವು ಅಥ್ಲೀಟ್‌ಗಳು ಹುಟ್ಟಿದ್ದಾರೆ. ಬಾಲಿವುಡ್‌ನಿಂದ ವ್ಯಕ್ತಿಯನ್ನು ಕರೆ ತರುವ ಅಗತ್ಯವೇನಿತ್ತು ಎಂದು 85ರ ಹರೆಯದ ಓಟದ ದಂತಕತೆ ಮಿಲ್ಖಾ ಸಿಂಗ್ ಪ್ರಶ್ನಿಸಿದ್ದಾರೆ.







