ಈಜುಕೊಳಕ್ಕೆ ನೀರು ಪೋಲು ಮಾಡುತ್ತಿರುವ ಧೋನಿ: ನೆರೆ ಮನೆಯವರ ಆರೋಪ

ರಾಂಚಿ, ಎ.24: ವಿವಾದಗಳು ಭಾರತದ ನಾಯಕ ಎಂಎಸ್ ಧೋನಿ ಬೆನ್ನು ಬಿಡುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಪತ್ರಕರ್ತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಧೋನಿಯ ವಿರುದ್ಧ ಅವರ ಮನೆಯ ನೆರೆ ಕರೆಯವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧೋನಿ ತನ್ನ ಮನೆಯ ಈಜುಕೊಳಕ್ಕೆ ದಿನವೊಂದಕ್ಕೆ 15,000 ಲೀಟರ್ ನೀರು ಪೋಲು ಮಾಡುತ್ತಿರುವುದು ನೆರೆ ಮನೆಯವರ ಕೋಪಕ್ಕೆ ಕಾರಣವಾಗಿದೆ.
‘‘ನಾವು ನಾಲ್ಕು ಬೋರ್‌ವೆಲ್ ಹೊಂದಿದ್ದೇವೆ. ಆದರೆ, ಅದ್ಯಾವುದೂ ಕೆಲಸ ಮಾಡುತ್ತಿಲ್ಲ. ನಮ್ಮ ಮನೆ ಪಕ್ಕದಲ್ಲಿರುವ ಧೋನಿಯ ನಿವಾಸದಲ್ಲಿ ಸಾವಿರಾರು ಲೀಟರ್ ನೀರನ್ನು ಪೋಲು ಮಾಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈಬಗ್ಗೆ ಗಮನ ಹರಿಸುವ ಅಗತ್ಯವಿದೆ’’ಎಂದು ಧೋನಿಯ ನೆರೆಮನೆಯ ರಾಜು ಶರ್ಮ ಹೇಳಿದ್ದಾರೆ.
ಧೋನಿ ನಿವಾಸವಿರುವ ಯಮುನಾ ನಗರದಲ್ಲಿ 5,000 ಮನೆಗಳಲ್ಲಿ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಆದರೆ, ಧೋನಿಯ ಸ್ವಿಮ್ಮಿಂಗ್ ಪೂಲ್ ನಿರ್ವಹಣೆಗಾಗಿ ಸಾವಿರಾರು ಲೀಟರ್ ನೀರು ಪೋಲು ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ರಾಜ್ಯದ ಕಂದಾಯ ಸಚಿವ ಅಮರ್ ಬೌರಿಗೆ ದೂರು ನೀಡಿದ್ದಾರೆ.





