ಆರ್‌ಸಿಬಿ ವಿರುದ್ಧ ಗುಜರಾತ್ ಲಯನ್ಸ್ ಗರ್ಜನೆ

ವಿರಾಟ್ ಕೊಹ್ಲಿ ಚೊಚ್ಚಲ ಶತಕ ವ್ಯರ್ಥ
ರಾಜ್‌ಕೋಟ್, ಎ.24: ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ನೇತೃತ್ವದ ಬ್ಯಾಟ್ಸ್‌ಮನ್‌ಗಳ ಸಂಘಟಿತ ಪ್ರಯತ್ನದ ನೆರವಿನಿಂದ ಗುಜರಾತ್ ಲಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್‌ನ 19ನೆ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ರವಿವಾರ ಇಲ್ಲಿನ ಎಸ್‌ಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 181 ರನ್ ಗುರಿ ಪಡೆದಿದ್ದ ಗುಜರಾತ್ ತಂಡ 19.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. 5ನೆ ಪಂದ್ಯದಲ್ಲಿ 4ನೆ ಜಯ ಸಾಧಿಸಿದ ಗುಜರಾತ್ 8 ಅಂಕ ಗಳಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ.
ಕಾರ್ತಿಕ್(ಔಟಾಗದೆ 50, 39 ಎಸೆತ, 3 ಬೌಂಡರಿ), ಬ್ರೆಂಡನ್ ಮೆಕಲಮ್(42ರನ್, 24 ಎ, 5 ಬೌಂಡರಿ, 2 ಸಿಕ್ಸರ್), ಡ್ವೆಯ್ನೆ ಸ್ಮಿತ್(32ರನ್, 21 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಸುರೇಶ್ ರೈನಾ(28 ರನ್) ಗುಜರಾತ್ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
ಇನಿಂಗ್ಸ್ ಆರಂಭಿಸಿದ ಸ್ಮಿತ್ ಹಾಗೂ ಮೆಕಲಮ್ ಮೊದಲ ವಿಕೆಟ್‌ಗೆ 47 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ನಾಯಕ ರೈನಾ, ಮೆಕಲಮ್‌ರೊಂದಿಗೆ 2ನೆ ವಿಕೆಟ್‌ಗೆ 40 ರನ್ ಹಾಗೂ ಕಾರ್ತಿಕ್‌ರೊಂದಿಗೆ ಮೂರನೆ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
6ನೆ ಓವರ್‌ನಲ್ಲಿ 25 ರನ್ ನೀಡಿದ ರಿಚರ್ಡ್‌ಸನ್ ಪ್ರಸ್ತುತ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ಮೂರನೆ ಬೌಲರ್ ಎನಿಸಿಕೊಂಡರು. ಹೈದರಾಬಾದ್ ಬೌಲರ್ ಭುವನೇಶ್ವರ್ ಕುಮಾರ್ ಒಂದೇ ಓವರ್‌ನಲ್ಲಿ 28 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.
ಕೊಹ್ಲಿ ಚೊಚ್ಚಲ ಶತಕ: ಆರ್‌ಸಿಬಿ 180/2
ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಚೊಚ್ಚಲ ಶತಕದ(ಔಟಾಗದೆ 100, 63 ಎಸೆತ, 11ಬೌಂಡರಿ, 1 ಸಿಕ್ಸರ್)ಸಹಾಯದಿಂದ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು.
ಶೇನ್ ವ್ಯಾಟ್ಸನ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಶತಕ ಪೂರೈಸಿದರು. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಶತಕ ಬಾರಿಸಿರುವ ಕೊಹ್ಲಿ, ಕೆ.ಎಲ್. ರಾಹುಲ್(ಔಟಾಗದೆ 51 ರನ್, 35 ಎಸೆತ, 4 ಬೌಂಡರಿ, 3 ಸಿಕ್ಸರ್) ಅವರೊಂದಿಗೆ ಮೂರನೆ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಆರ್‌ಸಿಬಿ ಈ ವರ್ಷದ ಐಪಿಎಲ್‌ನಲ್ಲಿ ಬಾರಿಸಿರುವ 4ನೆ ಶತಕದ ಜೊತೆಯಾಟ ಇದಾಗಿದೆ.
ವ್ಯಾಟ್ಸನ್(6) ವಿಕೆಟ್ ಕಬಳಿಸಿದ ಧವಳ್ ಕುಲಕರ್ಣಿ ಗುಜರಾತ್ ಲಯನ್ಸ್ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಫಾರ್ಮ್‌ನಲ್ಲಿರುವ ಆಟಗಾರ ಕೊಹ್ಲಿ, ಪ್ರವೀಣ್ ಕುಮಾರ್ ಬೌಲಿಂಗ್‌ನಲ್ಲಿ ಸತತ 2 ಬೌಂಡರಿ ಬಾರಿಸಿದರು.
ಆಗ ಗುಜರಾತ್ ನಾಯಕ ರೈನಾ ಸ್ಪಿನ್ನರ್ ಪ್ರವೀಣ್ ತಾಂಬೆ ಅವರನ್ನು ಬೇಗನೆ ಕಣಕ್ಕಿಳಿಸಿದರು. ತಾಂಬೆ ಎಸೆದ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದ ಕೊಹ್ಲಿ ತನ್ನದೇ ಶೈಲಿಯಲ್ಲಿ ಸ್ವಾಗತಿಸಿದರು. 2ನೆ ವಿಕೆಟ್‌ನಲ್ಲಿ 51 ರನ್ ಜೊತೆಯಾಟ ನಡೆಸಿದ ಕೊಹ್ಲಿ ಹಾಗೂ ಡಿವಿಲಿಯರ್ಸ್ ಆರ್‌ಸಿಬಿ ಪವರ್‌ಪ್ಲೇನಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಲು ನೆರವಾದರು.
7ನೆ ಓವರ್‌ನಲ್ಲಿ ದಾಳಿಗಿಳಿದ ರವೀಂದ್ರಜಡೇಜ ಬೌಂಡರಿ ವೇಗಕ್ಕೆ ಕಡಿವಾಣ ಹಾಕಿದರು. 8ನೆ ಓವರ್‌ನಲ್ಲಿ ಪ್ರವೀಣ್ ತಾಂಬೆ, ಡಿವಿಲಿಯರ್ಸ್(20) ವಿಕೆಟ್‌ಗಳನ್ನು ಉರುಳಿಸಿದರು.
10ನೆ ಓವರ್‌ನಲ್ಲಿ ಆರ್‌ಸಿಬಿ ಸ್ಕೋರ್ 76ಕ್ಕೆ 2. 3ನೆ ವಿಕೆಟ್‌ಗೆ ಜೊತೆಯಾದ ಕೊಹ್ಲಿ ಹಾಗೂ ರಾಹುಲ್ ಆರ್‌ಸಿಬಿ ಇನಿಂಗ್ಸ್‌ಗೆ ಚುರುಕು ಮುಟ್ಟಿಸಿದರು. ಕೊಹ್ಲಿ 6 ಬೌಂಡರಿಯ ನೆರವಿನಿಂದ ಐಪಿಎಲ್‌ನಲ್ಲಿ 23ನೆ ಅರ್ಧಶತಕ ಬಾರಿಸಿದರು. ಇದು ಈ ವರ್ಷದ ಟೂರ್ನಿಯಲ್ಲಿ ಕೊಹ್ಲಿ ಬಾರಿಸಿದ 4ನೆ ಅರ್ಧಶತಕವಾಗಿದೆ. ರಾಹುಲ್ 19ನೆ ಓವರ್‌ನಲ್ಲಿ 34 ಎಸೆತಗಳಲ್ಲಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಬ್ರಾವೊ ಎಸೆದ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ 17 ರನ್ ಗಳಿಸಿದ ಕೊಹ್ಲಿ ಇನಿಂಗ್ಸ್‌ನ್ನು ತನ್ನದೇ ಶೈಲಿಯಲ್ಲಿ ಕೊನೆಗೊಳಿಸಿದರು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 180/2
ವಿರಾಟ್ ಕೊಹ್ಲಿ ಔಟಾಗದೆ 100
ಶೇನ್ ವ್ಯಾಟ್ಸನ್ ಸಿ ಜಡೇಜ ಬಿ ಕುಲಕರ್ಣಿ 06
ಡಿವಿಲಿಯರ್ಸ್ ಸಿ ರೈನಾ ಬಿ ತಾಂಬೆ 20
ಕೆಎಲ್ ರಾಹುಲ್ ಔಟಾಗದೆ 51
ಇತರ 3
ವಿಕೆಟ್ ಪತನ: 1-8, 2-59.
ಬೌಲಿಂಗ್ ವಿವರ:
ಪ್ರವೀಣ್ ಕುಮಾರ್ 3-0-28-0
ಧವಲ್ ಕುಲಕರ್ಣಿ 4-0-39-1
ಪ್ರವೀಣ್ ತಾಂಬೆ 3-0-24-1
ಜಕಾತಿ 3-0-28-0
ರವೀಂದ್ರ ಜಡೇಜ 3-0-17-0
ಡ್ವೆಯ್ನೆ ಬ್ರಾವೊ 4-0-43-0
ಗುಜರಾತ್ ಲಯನ್ಸ್: 19.3 ಓವರ್‌ಗಳಲ್ಲಿ 182/4
ಡ್ವೇಯ್ನ ಸ್ಮಿತ್ ಸಿ ಡಿವಿಲಿಯರ್ಸ್ ಬಿ ರಿಚರ್ಡ್‌ಸನ್ 32
ಬ್ರೆಂಡನ್ ಮೆಕಲಮ್ ಸಿ ಮತ್ತು ಬಿ ಶಂಸಿ 42
ಸುರೇಶ್ ರೈನಾ ಸಿ ಅಬ್ದುಲ್ಲಾ ಬಿ ಚಾಹಲ್ 28
ದಿನೇಶ್ ಕಾರ್ತಿಕ್ ಔಟಾಗದೆ 50
ರವೀಂದ್ರ ಜಡೇಜ ಸಿ ರಾಹುಲ್ ಬಿ ವ್ಯಾಟ್ಸನ್ 12
ಬ್ರಾವೊ ಔಟಾಗದೆ 04
ಇತರ 14
ವಿಕೆಟ್ ಪತನ: 1-47, 2-87, 3-140, 4-178
ಬೌಲಿಂಗ್ ವಿವರ:
ವೈಎಸ್ ಚಾಹಲ್ 4-0-33-1
ರಿಚರ್ಡ್‌ಸನ್ 4-0-53-1
ಇಕ್ಬಾಲ್ ಅಬ್ದುಲ್ಲಾ 4-0-41-0
ಶೇನ್ ವ್ಯಾಟ್ಸನ್ 3.3-0-31-1
ಶಂಸಿ 4-0-21-1







