ಸಿಎಂ ಸಿದ್ದರಾಮಯ್ಯ ಜನಪರ ನಾಯಕ: ಪೂಜಾರಿ
ಬಿಲ್ಲವ ಭವನ ಸಂಕೀರ್ಣ ಉದ್ಘಾಟನೆ

ಬೆಂಗಳೂರು, ಎ. 24: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದ ಹಿನ್ನೆಲೆಯುಳ್ಳವರಾಗಿದ್ದು, ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಜನನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಬಣ್ಣಿಸಿದ್ದಾರೆ.
ರವಿವಾರ ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಬಿಲ್ಲವ ಅಸೋಸಿಯೇಶನ್ ಏರ್ಪಡಿಸಿದ್ದ ಬಿಲ್ಲವ ಭವನ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದುಳಿದ ಅಭಿವೃದ್ಧಿಗಾಗಿ ಶ್ರಮಿಸಲು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅಲ್ಲದೆ, ಪ್ರಮಾಣವಚನ ಸ್ವೀಕರಿಸಿದ ನಂತರ ಕೆಲವೇ ಗಂಟೆಗಳಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು ಎಂದ ಅವರು, ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ‘ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲಾಗುವುದೆಂದು ಭರವಸೆ ನೀಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಹೇಳಿದರು.
ಬಿಲ್ಲವ ಸಮುದಾಯದ ಪ್ರಗತಿಯ ಚಟುವಟಿಕೆಗಳು ಒಂದೇ ಸಮುದಾಯಕ್ಕೆ ಸೀಮಿತವಾಗಬಾರದು. ಇತರರಿಗೂ ಸೇವೆ ನೀಡಲು ಜನಾಂಗದ ಮುಖಂಡರು ಮುಂದಾಗಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿವಾದ, ಕೋಮುವಾದ ಸಂಗತಿಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಎಲ್ಲ ಬಿಲ್ಲವ ಜನಾಂಗ ಗುರುಗಳ ಹಾದಿಯಲ್ಲಿ ಸಾಗಬೇಕೆಂದು ಕಿವಿಮಾತು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಹಿಂದುಳಿದ ಮತ್ತು ದಲಿತರ ಪ್ರಗತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಮುದಾಯದವರು ಮುಂದಾಗಬೇಕು. ಬಿಲ್ಲವ ಭವನಕ್ಕೆ ಸಂಬಂಧಪಟ್ಟಂತೆ ಬಾಕಿ ಯಿರುವ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ತಜ್ಞರ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಚಿಂತನೆಗಳನ್ನು ವಿಶ್ವ ವ್ಯಾಪ್ತಿಗೆ ವಿಸ್ತರಿಸಬೇಕು. ಅವರನ್ನು ಕೇವಲ ದೇವಸ್ಥಾನದಲ್ಲಿ ಬಂಧಿಸಬಾರದು. ಎಲ್ಲ ಸಮುದಾಯದವರ ಮನ ಗೆಲ್ಲುವ ರೀತಿಯಲ್ಲಿ ಬಿಲ್ಲವ ಜನಾಂಗದ ಮುಖಂಡರು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಶಾಸಕ ಸತೀಶ್ ರೆಡ್ಡಿ, ಅಸೋಸಿಯೇಶನ್ ಅಧ್ಯಕ್ಷ ಎಂ.ವೇದಕುಮಾರ್ ಸೇರಿದಂತೆ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.





