ಅಮೆರಿಕ ವಿರುದ್ಧ ಭಾರತದ ನಿಲುವು ಮೆದು
ಸೌರ ಉಪಕರಣಗಳ ವ್ಯಾಪಾರ ವಿವಾದ
ನ್ಯೂಯಾರ್ಕ್, ಎ. 24: ಸೌರ ವಿದ್ಯುತ್ ಉಪಕರಣಗಳ ವ್ಯವಹಾರಕ್ಕೆ ಸಂಬಂಧಿಸಿದ ವಿವಾದದಲ್ಲಿ, ಅಮೆರಿಕದ ವಿರುದ್ಧದ ತನ್ನ ಧೋರಣೆಯನ್ನು ಭಾರತ ಮೆದುಗೊಳಿಸಿದೆ. ಜಗತ್ತಿನ ಅತ್ಯುನ್ನತ ವ್ಯಾಪಾರ ಪ್ರಾಧಿಕಾರ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ)ಯಲ್ಲಿ ಮೊಕದ್ದಮೆ ಹೂಡುವ ಬದಲು ಅಮೆರಿಕದೊಂದಿಗೆ ಭಾರತ ಮಾತುಕತೆಗೆ ಮುಂದಾಗಿದೆ. ‘‘ಭಾರತದ ಕಾನೂನು ಆಯ್ಕೆಗಳು ಪ್ರಬಲವಾಗಿದ್ದರೂ, ನಾವು ಯಾವಾಗಲೂ ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಲು ಯತ್ನಿಸುತ್ತೇವೆ’’ ಎಂದು ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಭಾರತೀಯ ಸುದ್ದಿ ಚಾನೆಲ್‌ನೊಂದಿಗೆ ಮಾತನಾಡುತ್ತಾ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಎಪ್ರಿಲ್ 22ರಂದು ನಡೆದ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದ ನೇಪಥ್ಯದಲ್ಲಿ ಜಾವಡೇಕರ್ ಮತ್ತು ವಿದ್ಯುತ್, ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪೀಯುಶ್ ಗೋಯಲ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿಯನ್ನು ಭೇಟಿಯಾದರು. ಡಬ್ಲುಟಿಒ ವಿವಾದಗಳು ಸೇರಿದಂತೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ತಾವು ಕೆರಿಯೊಂದಿಗೆ ಚರ್ಚೆ ನಡೆಸಿದೆವು ಎಂದು ಅವರು ಬಳಿಕ ಹೇಳಿದರು.
‘‘ಹವಾಮಾನ ಪರಿವರ್ತನೆಯೊಂದಿಗೆ ಜಗತ್ತು ಹೆಣಗುತ್ತಿರುವಾಗ, ದೇಶಗಳು ಪರಸ್ಪರರ ಬಗ್ಗೆ ಹೆಚ್ಚು ಉದಾರತೆಯಿಂದ ವ್ಯವಹರಿಸಬೇಕು ಹಾಗೂ ಅಮೆರಿಕ ‘‘ಕೊಡುಕೊಳ್ಳುವಿಕೆ’’ ನೀತಿಯನ್ನು ಅನುಸರಿಸಬೇಕು’’ ಎಂದು ಜಾವಡೇಕರ್ ಹೇಳಿದರು.





