ಆಂಜನೇಯ ವಿರುದ್ಧ ಹರಿಪ್ರಸಾದ್, ಪೂಜಾರಿ ವಾಗ್ದಾಳಿ

ಬೆಂಗಳೂರು, ಎ. 24: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತ, ಮುಸುಕಿನ ಗುದ್ದಾಟಕ್ಕೆ ರವಿವಾರ ಬೆಂಗಳೂರು ಹೊರ ವಲಯದ ಬನ್ನೇರುಘಟ್ಟ ರಸ್ತೆಯಲ್ಲಿನ ಬಿಲ್ಲವ ಭವನ ಸಂಕೀರ್ಣ ಉದ್ಘಾಟನಾ ಸಮಾರಂಭದ ವೇದಿಕೆಯಾಗಿದ್ದು, ನಿಜಕ್ಕೂ ವಿಪರ್ಯಾಸವೇ ಸರಿ.
‘ಅತ್ಯಂತ ನಿಷ್ಠುರವಾಗಿ ಮಾತನಾಡುವುದನ್ನು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಬಿಡಬೇಕು’ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸಲಹೆ ನೀಡಿ ನಿರ್ಗಮಿಸಿದರು. ಆ ಬಳಿಕ ಮಾತನಾಡಿದ ಜನಾರ್ದನ ಪೂಜಾರಿ ಸಚಿವ ಆಂಜನೇಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಅಲ್ಲದೆ, ರಾಜ್ಯಸಭಾ ಬಿ.ಕೆ.ಹರಿಪ್ರಸಾದ್ ಕೂಡ ಆಂಜನೇಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪೂಜಾರಿ ಭಾಷಣಕ್ಕೂ ಮುನ್ನವೇ ಬಿ.ಕೆ.ಹರಿಪ್ರಸಾದ್, ಸಚಿವರಾದ ರಾಮಲಿಂಗರೆಡ್ಡಿ, ದಿನೇಶ್ ಗುಂಡೂರಾವ್, ಆಂಜನೇಯ ಅವರು ಕಾರ್ಯಕ್ರಮದಿಂದ ಹೊರನಡೆದದ್ದು ಅಚ್ಚರಿ ಮೂಡಿಸಿತು.
ಆಂಜನೇಯ ಹೇಳಿದ್ದೇನು?: ಸಮಾರಂಭದಲ್ಲಿ ಆರಂಭಕ್ಕೆ ಮಾತನಾಡಿದ ಸಚಿವ ಆಂಜನೇಯ, ಜನಾರ್ದನ ಪೂಜಾರಿಗೆ ನೇರವಾಗಿ ಬುದ್ಧಿಮಾತುಗಳನ್ನು ಹೇಳಲು ಆರಂಭಿಸಿದರು. ‘ಚುನಾವಣೆ ಮುಗಿಯುವವರೆಗೂ ಯಾವುದೇ ರಾಜಕೀಯ ಪ್ರೇರಿತ ಹೇಳಿಕೆ ನೀಡದೆ ತಾಳ್ಮೆಯಿಂದ ಇರಿ’ ಎಂದು ಪೂಜಾರಿ ಅವರಿಗೆ ಸಲಹೆ ನೀಡಿದರು.
‘ಪ್ರಾಮಾಣಿಕರಿಗೆ ನೈತಿಕತೆ ಜಾಸ್ತಿ ಇರುತ್ತದೆ. ಆದರೆ, ಈ ನೈತಿಕತೆಯು ಕೆಲ ಬಾರಿ ದಾರಿ ತಪ್ಪಿಸಿಬಿಡುತ್ತದೆ. ನಿಮ್ಮ ನೇರ ನುಡಿಯಿಂದಲೇ ಜನರು ನಿಮ್ಮನ್ನು ಸೋಲಿಸಿದ್ದಾರೆ. ಹೀಗಾಗಿ ತಾವು ಆರೋಗ್ಯಕರ ಟೀಕೆ ಮಾಡಿದರೆ ನಿಮಗೂ ಒಳ್ಳೆಯದಾಗುತ್ತದೆ. ಮತ್ತೊಂದು ಸಲ ಗೆಲ್ಲಿಸುವಂತೆ ದಕ್ಷಿಣ ಕನ್ನಡ ಜನತೆಯನ್ನು ಕೇಳಿಕೊಳ್ಳಿ’ ಎಂದು ಆಂಜನೇಯ ಪೂಜಾರಿಯವರಿಗೆ ಸೂಚಿಸಿದರು.
‘ಪೂಜಾರಿಯವರೇ, ನೀವು ನಮಗೋಸ್ಕರ ರಾಜಕೀಯದಲ್ಲಿರಬೇಕು. ಉಗ್ರವಾಗಿ ಮಾತನಾಡುವುದು ಎಲ್ಲದಕ್ಕೂ ಪರಿಹಾರವಲ್ಲ. ನೀವು ವಿವಾದ ಸೃಷ್ಟಿಸಿಕೊಂಡಿರದಿದ್ದರೆ ಸಿದ್ದರಾಮಯ್ಯಗಿಂತ ಮೊದಲೇ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ದಿರಿ. ಹತ್ತು ವರ್ಷ ಕೇಂದ್ರದ ಮಂತ್ರಿಯಾಗಿರುತ್ತಿದ್ದಿರಿ’ ಎಂದು ಸಚಿವ ಆಂಜನೇಯ ಕಿವಿಮಾತು ಹೇಳಿದರು.
ಹರಿಪ್ರಸಾದ್ ವ್ಯಂಗ್ಯ: ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಪೂಜಾರಿಯವರಿಗೆ ಸಚಿವರು ಬುದ್ಧಿವಾದ ಹೇಳೊ ಮಟ್ಟಕ್ಕೆ ಬೆಳೆದಿದ್ದಾರೆ. ಕೆಲವರು ಮಂತ್ರಿಯಾದ ಕೂಡಲೇ ಎಲ್ಲರಿಗೂ ಬುದ್ಧಿವಾದ ಹೇಳಬಹುದೆಂಬ ಭ್ರಮೆಯಲ್ಲಿರುತ್ತಾರೆಂದು ಸಚಿವ ಆಂಜನೇಯ ಹೆಸರೇಳದೆ ವ್ಯಂಗ್ಯವಾಡಿದರು.
‘ಜನಾರ್ದನ ಪೂಜಾರಿ ಅಡ್ಡದಾರಿ ಹಿಡಿದಿದ್ದರೆ ಎಷ್ಟೋ ಚುನಾವಣೆಗಳನ್ನು ಗೆಲ್ಲಬಹುದಿತ್ತು. ಆದರೆ, ಪೂಜಾರಿಯವರು ಆ ರೀತಿಯಲ್ಲಿ ಬದಲಾಗುವುದು ಬೇಡ. ಅವರು ಈಗಿರುವಂತೆಯೇ ಇರಲಿ. ನೇರ-ನಿಷ್ಟ್ಟುರತೆಯಿಂದಲೇ ಅವರು ನಮ್ಮ ಜೊತೆಗೆ ಇರಬೇಕು. ಹೀಗಾಗಿಯೇ ಅವರು ಸುದೀರ್ಘ ರಾಜಕೀಯ ಅವಧಿಯಲ್ಲಿ ಕೇಂದ್ರದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರೂ, ಒಂದೇ ಒಂದು ಕಪ್ಪು ಚುಕ್ಕೆ, ಯಾವುದೇ ಭ್ರಷ್ಟಾಚಾರದ ಹೊಲಸನ್ನು ಅಂಟಿಸಿಕೊಂಡಿಲ್ಲ. ಯಾರೊಬ್ಬರಿಗೆ ಪೂಜಾರಿಯವರಿಗೆ ಬೆಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ’ ಎಂದು ನುಡಿದರು.
ಪೂಜಾರಿ ತರಾಟೆ: ನಿಷ್ಠುರವಾಗಿ ಮಾತನಾಡಬಾರದು ಎಂದು ತನಗೆ ಸಲಹೆ ನೀಡಿದ ಸಚಿವ ಆಂಜನೇಯ ವಿರುದ್ಧ ಜನಾರ್ದನ ಪೂಜಾರಿ ಸಮಾರಂಭದಲ್ಲಿ ಕಿಡಿಕಾರಿದರು.
ಎಲ್ಲ ವಿಷಯಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವುದಕ್ಕೆ ಎದೆಗಾರಿಕೆ ಇರಬೇಕು ಎಂದ ಪೂಜಾರಿ, ಹರಿಪ್ರಸಾದ್, ಉಗ್ರಪ್ಪನವರಂತೆ ನಿಷ್ಠುರವಾಗಿ ಮಾತನಾಡಿ ತೋರಿಸಬೇಕೆಂದು ಸಚಿವ ಆಂಜನೇಯ ಅವರಿಗೆ ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.
ಪೂಜಾರಿಗೆ ಸರಿಯಾದ ಉತ್ತರ ನೀಡಿ ಬರುತ್ತೇನೆಂದು ಸಿಎಂಗೆ ಆಂಜನೇಯ ಹೇಳಿಬಂದಿರಬೇಕೆಂದು ವ್ಯಂಗ್ಯವಾಡಿದ ಪೂಜಾರಿ, ನಾನು ಸುಮ್ಮನೆ ಇರುತ್ತಿದ್ದೆ. ಆದರೆ, ಆಂಜನೇಯರ ಮಾತಿನಿಂದಾಗಿ ತಾನೀಗ ಬಾಯಿ ತೆರೆದು ಮಾತನಾಡಲೇಬೇಕಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಲ್ಲವ ಕಾರ್ಯಕ್ರಮಕ್ಕೆ ಆಗಮಿಸದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೂಜಾರಿ, ‘ನಿಮಗೆ ಅನಾರೋಗ್ಯವಿದ್ದಿದ್ದರೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು ಬರಬಹುದಿತ್ತು. ಕನಿಷ್ಠ ‘ವ್ಹೀಲ್ಚೇರ್’ನಲ್ಲಾದರೂ ಬರಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ಬಾರದೆ ಹೆಸರು ಹಾಳು ಮಾಡಿಕೊಳ್ಳುತ್ತಿದ್ದೀರಿ ಎಂದು ಟೀಕಿಸಿದರು.
ನಾನು ಸಿಎಂ ಆಗಬಹುದಿತ್ತು: ರಾಜ್ಯದಲ್ಲಿ ನನಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಬಂದಿತ್ತು. ಅಲ್ಲದೆ, ಇದಕ್ಕೆ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರು ಸಮ್ಮತಿಸಿದ್ದರು. ಆದರೆ, ನನಗೆ ಕಲೆಕ್ಷನ್ ಮಾಡಲು ಬರುವುದಿಲ್ಲವೆಂದು ನಾನು ಸುಮ್ಮನಾದೆ ಎಂದು ಪೂಜಾರಿ ಮಾರ್ಮಿಕವಾಗಿ ನುಡಿದರು.
ಉಗ್ರಪ್ಪರಿಗೆ ಸಚಿವ ಸ್ಥಾನ: ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ತಜ್ಞರ ಸಮಿತಿ ಅಧ್ಯಕ್ಷರೂ ಆಗಿರುವ ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಅವರಿಗೆ ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಸ್ಪಷ್ಟ ಮಾಹಿತಿಯಿದೆ. ಹೀಗಾಗಿ, ಇವರನ್ನು ಕಾನೂನು ಸಚಿವರನ್ನಾಗಿ ಮಾಡಬೇಕೆಂದು ಪೂಜಾರಿ ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಆಗ್ರಹಿಸಿದರು.
ಕರ್ನಾಟಕದ ಲೋಕಾಯುಕ್ತ ಸಂಸ್ಥೆ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಅಲ್ಲದೆ, ಮಾಜಿ ಸಿಎಂ ಬಿ.ಎಸ್.ಯೂಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲು ಇದೇ ಲೋಕಾಯುಕ್ತ ಸಂಸ್ಥೆ ಕಾರಣ. ಆದರೆ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಜಾರಿಗೆ ತಂದು ಸಿದ್ದರಾಮಯ್ಯ ದೊಡ್ಡ ತಪ್ಪು ಮಾಡಿದ್ದಾರೆ. ಸರಕಾರ ಮತ್ತು ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ನ್ಯಾಯ ಒದಗಿಸಲು ಸಿದ್ದರಾಮಯ್ಯ ಮುಂದಾಗುತ್ತಾರಾ.
-ಬಿ.ಜನಾರ್ದನ ಪೂಜಾರಿ, ಕೇಂದ್ರದ ಮಾಜಿ ಸಚಿವ







