ಪೊಲೀಸ್ ಸಿಬ್ಬಂದಿ ಕೊರತೆ; ಸೂಕ್ತ ರೀತಿಯಲ್ಲಿ ವಿವರಣೆ ನೀಡಿ
ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ
ಬೆಂಗಳೂರು, ಎ.24: ರಾಜ್ಯದ ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಹಿನ್ನೆಲೆ ಹಾಗೂ ಈ ಸಮಸ್ಯೆಯನ್ನು ನ್ಯಾಯಪೀಠಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪೊಲೀಸ್ ಸಿಬ್ಬಂದಿ ಕೊರತೆ ಮತ್ತು ಠಾಣೆಗೆ ದಾಖಲಾಗಿರುವ ದೂರುಗಳ ವಿಚಾರಣೆ ವಿಳಂಬಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ.ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠ, ನೇಮಕ ವಿಳಂಬಕ್ಕೆ ಸಂಬಂಧಿಸಿ ಮುಂದಿನ ವಿಚಾರಣೆ ವೇಳೆ ರಾಜ್ಯ ಅಡ್ವೊಕೇಟ್ ಜನರಲ್ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚನೆ ನೀಡಿದೆ.
ಪೊಲೀಸ್ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠಕ್ಕೆ ಈ ಹಿಂದೆಯೇ ಸರಕಾರ ಹೇಳಿಕೆ ನೀಡಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ರೀತಿಯ ಬೆಳವಣಿಗೆ ಕಾಣುತ್ತಿಲ್ಲ. ನೇಮಕ ಪ್ರಕ್ರಿಯೆಗೆ ಇರುವ ಸಮಸ್ಯೆ ಕುರಿತು ಸರಕಾರ ಕೋರ್ಟ್‌ಗೆ ಸರಿಯಾದ ಹೇಳಿಕೆ ನೀಡುತ್ತಿಲ್ಲ. ನೇಮಕಕ್ಕಿರುವ ತೊಡಕುಗಳೇನು ಎಂಬ ಬಗ್ಗೆ ಚರ್ಚಿಸಿ ವಿವರಣೆ ನೀಡಬೇಕೆಂದು ಸೂಚಿಸಿ ವಿಚಾರಣೆ ಮುಂದೂಡಿತು. ಪೊಲೀಸ್ ಇಲಾಖೆ ವಿಫಲ: ಬೆಂಗಳೂರು ನಗರದಲ್ಲಿ ಗಾರ್ಮೆಂಟ್ ನೌಕರರ ಪ್ರತಿಭಟನೆಗೆ ಮೂಲ ಕಾರಣವನ್ನು ತಿಳಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 1.25 ಲಕ್ಷ ಜನ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಈ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದ ನ್ಯಾಯಪೀಠ ಈ ಘಟನೆಯ ಹಿಂದೆ ಬೇರೆ ಶಕ್ತಿಗಳ ಕೈವಾಡವಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಪೊಲೀಸ್ ಇಲಾಖೆಯನ್ನು ಬಲವರ್ಧನೆಗೊಳಿಸಬೇಕಾಗಿದೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಹಲವಾರು ಪ್ರಕರಣಗಳು ತನಿಖೆ ವಿಳಂಬವಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ವಿಧಿವಿಜ್ಞಾನ ಪ್ರಯೋಗಾಲಯ ಇಲಾಖೆಯಲ್ಲೂ ಸಿಬ್ಬಂದಿ ಕೊರತೆಯಿದ್ದು, ಹಲವಾರು ಪ್ರಕರಣಗಳು 6 ತಿಂಗಳಿಗೂ ಹೆಚ್ಚು ಕಾಲ ವಿಚಾರಣಾ ಹಂತದಲ್ಲಿ ಇರುವಂತಾಗಿದೆ. ಇದಕ್ಕೆಲ್ಲ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮೂಲ ಕಾರಣವಾಗಿದ್ದು, ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿ ಸರಕಾರ ಶೀಘ್ರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದೆ.





