ಪೆಸಿಫಿಕ್ ಸಾಗರ ದಾಟಿ ಸ್ಯಾನ್ಫ್ರಾನ್ಸಿಸ್ಕೊ ತಲುಪಿದ ಸೌರ ವಿಮಾನ

ಸ್ಯಾನ್ಫ್ರಾನ್ಸಿಸ್ಕೊದ ಗೋಲ್ಡನ್ ಗೇಟ್ ಸೇತುವೆಯ ಮೇಲೆ ಶನಿವಾರ ಹಾರಾಟ ನಡೆಸುತ್ತಿರುವ ಸೌರಶಕ್ತಿ ಚಾಲಿತ ವಿಮಾನ ‘ಸೋಲಾರ್ ಇಂಪಲ್ಸ್ 2’.
ಸ್ಯಾನ್ಫ್ರಾನ್ಸಿಸ್ಕೊ, ಎ. 24: ಸೌರಶಕ್ತಿ ಚಾಲಿತ ವಿಮಾನವೊಂದು ತನ್ನ ವಿಶ್ವಪರ್ಯಟನೆಯ ಭಾಗವಾಗಿ ಪೆಸಿಫಿಕ್ ಸಾಗರದಲ್ಲಿ 56 ಗಂಟೆಗಳ ಸುದೀರ್ಘ ಯಾನವನ್ನು ಮುಗಿಸಿ ಶನಿವಾರ ಸ್ಯಾನ್ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶವನ್ನು ತಲುಪಿದೆ. ಬಳಿಕ ಅಪರಾಹ್ನ ಗೋಲ್ಡನ್ ಗೇಟ್ ಸೇತುವೆಯ ಮೇಲೆ ಹಾರಾಟ ನಡೆಸಿತು.
‘‘ನಾನು ಸೇತುವೆಯನ್ನು ದಾಟಿದ್ದೇನೆ. ಈಗ ನಾನು ಅಧಿಕೃತವಾಗಿ ಅಮೆರಿಕದಲ್ಲಿದ್ದೇನೆ’’ ಎಂದು ಐತಿಹಾಸಿಕ ಸೇತುವೆಯನ್ನು ದಾಟುತ್ತಿದ್ದಂತೆಯೇ ಪೈಲಟ್ ಬರ್ಟ್ರಾಂಡ್ ಪಿಕಾರ್ಡ್ ಘೋಷಿಸಿದರು. ಭಾರಿ ಅಗಲದ ರೆಕ್ಕೆಗಳನ್ನು ಹೊಂದಿದ ಸಪುರ ದೇಹದ ವಿಮಾನ ಸೇತುವೆಯನ್ನು ದಾಟುವುದನ್ನು ಜನರು ವೀಕ್ಷಿಸಿದರು.
‘‘ಕಳೆದ ಶತಮಾನಗಳಲ್ಲಿ ಹಡಗುಗಳು ದಾಟಿದಂತೆ ಸೌರಚಾಲಿತ ವಿಮಾನದಲ್ಲಿ ಗೋಲ್ಡನ್ ಗೇಟ್ ಸೇತುವೆಯನ್ನು ದಾಟುವುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೇ? ಆದರೆ, ಇಲ್ಲಿ ವಿಮಾನ ಸದ್ದು ಮಾಡುವುದಿಲ್ಲ ಹಾಗೂ ಮಾಲಿನ್ಯ ಉಂಟು ಮಾಡುವುದಿಲ್ಲ’’ ಎಂದು ಈ ಪ್ರಯಾಣವನ್ನು ಪ್ರಸಾರ ಮಾಡುತ್ತಿರುವ ವೆಬ್ಸೈಟ್ಗೆ ಲೈವ್ ವೀಡಿಯೊ ದೃಶ್ಯಗಳನ್ನು ನೀಡಿದ ಪಿಕಾರ್ಡ್ ಹೇಳಿದರು.





