ಪ್ರಧಾನಿ ಮೋದಿಯೆದುರು ಕಣ್ಣಿರಿಟ್ಟ ನ್ಯಾ.ಠಾಕೂರ್ ಹೆಚ್ಚಿನ ನ್ಯಾಯಾಧೀಶರನ್ನು ನೀಡಲು ಆಗ್ರಹ
ಹೊಸದಿಲ್ಲಿ,ಎ.24: ಮೊಕದ್ದಮೆಗಳ ಮಹಾಪೂರವನ್ನು ಎದುರಿಸಲು ನ್ಯಾಯಾಧೀಶರ ಸಂಖ್ಯೆಯನ್ನು ಈಗಿರುವ 21,000 ದಿಂದ 40,000ಕ್ಕೆ ಹೆಚ್ಚಿಸುವಂತೆ ರವಿವಾರ ಇಲ್ಲಿ ಸಭೆಯೊಂದರಲ್ಲಿ ಸರಕಾರಕ್ಕೆ ಮನವಿ ಮಾಡಿಕೊಂಡ ಶ್ರೇಷ್ಠ ನ್ಯಾಯಾಧೀಶ ಟಿ.ಎಸ್.ಠಾಕೂರ್ ಅವರು ಒಂದು ಹಂತದಲ್ಲಿ ತೀವ್ರ ಭಾವುಕರಾಗಿ ಕಣ್ಣಿರಿಟ್ಟರು. ಪ್ರಧಾನಿ ನರೇಂದ್ರ ಮೋದಿ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ತಾನು ಮಾತನಾಡುವ ಸರದಿ ಬಂದಿರದಿದ್ದರೂ ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಮೋದಿ,ಸಮಸ್ಯೆಗಳನ್ನು ತನ್ನ ಸರಕಾರವು ಗಂಭೀರವಾಗಿ ಪರಿಗಣಿಸಿದೆ ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಎಂದು ನ್ಯಾಯಾಂಗಕ್ಕೆ ಭರವಸೆ ನೀಡಿದರು.
ಮುಖ್ಯಮಂತ್ರಿಗಳು ಮತ್ತು ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರ ಸಭೆಯಲ್ಲಿ ಮಾತನಾಡುತ್ತಿದ್ದ ನ್ಯಾ.ಠಾಕೂರ್ ಅವರು,ದೇಶದ ಅಭಿವೃದ್ಧಿಗಾಗಿ ಸಮಯಕ್ಕೆ ಸರಿಯಾಗಿ ಕ್ರಮಗಳನ್ನು ಕೈಗೊಳ್ಳುವಂತೆ ನಾನು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ನೀವು ಸಂಪೂರ್ಣ ಹೊರೆಯನ್ನು ನ್ಯಾಯಾಂಗದ ಮೇಲೆಯೇ ಹೊರಿಸುವಂತಿಲ್ಲ. ನ್ಯಾಯಾಧೀಶರ ಸಾಮರ್ಥ್ಯಕ್ಕೂ ಒಂದು ಮಿತಿಯಿದೆ ಎಂದು ಹೇಳಿದರು.
ಭಾರತದಲ್ಲಿ ನ್ಯಾಯಾಂಗದ ಕಾರ್ಯ ನಿರ್ವಹಣೆಯ ಬಗ್ಗೆ ವಿದೇಶಗಳಲ್ಲಿಯ ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು,ಭಾರತದಲ್ಲಿ ಸರಾಸರಿ ಓರ್ವ ನ್ಯಾಯಾಧೀಶರು ವರ್ಷಕ್ಕೆ 2,600 ಪ್ರಕರಣಗಳನ್ನು ನಿರ್ವಹಿಸುತ್ತಿದ್ದಾರೆ. ಅದೇ ವೇಳೆ ಅಮೆರಿಕದಲ್ಲಿ ಈ ಪ್ರಮಾಣ 81 ಪ್ರಕರಣಗಳು ಮಾತ್ರ. ಅಧೀನ ನ್ಯಾಯಾಲಯಗಳು ವರ್ಷಕ್ಕೆ ಎರಡು ಕೋಟಿ ಪ್ರಕರಣಗಳನ್ನು ನಿಭಾಯಿಸುತ್ತಿವೆ ಎಂದರು.
ನ್ಯಾಯಾಧೀಶರ ಸಂಖ್ಯೆಯನ್ನು ಪ್ರತಿ 10 ಲಕ್ಷ ಜನಕ್ಕೆ 10ರಿಂದ 50ಕ್ಕೆ ಹೆಚ್ಚಿಸುವಂತೆ ಕಾನೂನು ಆಯೋಗವು 1987ರಿಂದಲೂ ಶಿಫಾರಸು ಮಾಡುತ್ತಲೇ ಬಂದಿದೆ. ಆದರೆ ಯಾವುದೇ ಪ್ರಗತಿಯಾಗಿಲ್ಲ ಎಂದ ನ್ಯಾ.ಠಾಕೂರ್, ಭಾಷಣಗಳನ್ನು ಕೇಳುತ್ತಲೇ ಇದ್ದೇವೆ,ಆದರೆ ನಿಜಕ್ಕೂ ಏನೂ ಆಗುತ್ತಿಲ್ಲ. ಹೌದು,ಈ ಬಗ್ಗೆ ರಾಜ್ಯಗಳು ಉಪಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರವು ಹೇಳುತ್ತಿದೆ ಮತ್ತು ರಾಜ್ಯಗಳು ಕೇಂದ್ರದತ್ತ ಬೆಟ್ಟು ಮಾಡುತ್ತಿವೆ. ಹಗ್ಗ ಜಗ್ಗಾಟ ಮುಂದುವರಿಯುತ್ತಲೇ ಇದೆ ಎಂದರು.
ಉನ್ನತ ಕಾರ್ಪೊರೇಟ್ ಕಕ್ಷಿದಾರರಿಗಾಗಿ ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಧಾನಿ ಮೋದಿಯವರ ಯೋಜನೆಯನ್ನೂ ತರಾಟೆಗೆತ್ತಿಕೊಂಡ ಅವರು, ಹಾಲಿ ಇರುವ ನ್ಯಾಯಾಧೀಶರನ್ನೇ ಈ ಯೋಜನೆಗೆ ಬಳಸಿಕೊಳ್ಳಲು ಸರಕಾರವು ಯೋಜಿಸುತ್ತಿದ್ದರೆ ಈ ವ್ಯವಸ್ಥೆ ಫಲ ನೀಡುವುದಿಲ್ಲ. ಹಳೆಯ ಮದ್ಯವನ್ನೇ ಹೊಸ ಬಾಟ್ಲಿಯಲ್ಲಿ ತುಂಬಿದರೆ ಕೆಲಸವಾಗುವುದಿಲ್ಲ ಎಂದು ಕುಟುಕಿದರು.
ಪ್ರಧಾನಿಯವರ ಮಹತ್ವಾಕಾಂಕ್ಷೆಯ ಎಫ್‌ಡಿಐ,ಮೇಕ್ ಇನ್ ಇಂಡಿಯಾ ಇತ್ಯಾದಿಗಳು ಯಶಸ್ವಿಯಾಗಲು ಹೆಚ್ಚಿನ ನ್ಯಾಯಾಧೀಶರ ನೇಮಕ ಮತ್ತು ತ್ವರಿತ ನ್ಯಾಯದಾನ ವ್ಯವಸ್ಥೆ ಅಗತ್ಯವಾಗಿದೆ ಎಂದರು.





