ಮಾನವೀಯತೆ ಮೆರೆದ ಅಯ್ಯೂಬ್
ನೀರಿನ ಸಮಸ್ಯೆಯಿಂದ ಮುಕ್ತರಾದ ಗ್ರಾಮಸ್ಥರು

ವಿಜಯಪುರ,ಎ.24:ಬರ ಪರಿಸ್ಥಿತಿಯನ್ನೆದುರಿಸುತ್ತಿರುವ ವಿಜಯಪುರ ಜಿಲ್ಲೆಯಲ್ಲಿ ನೀರಿನ ತೀವ್ರ ಕೊರತೆ ಎದುರಾಗಿದ್ದು, ಬೇಡಿಕೆಯನ್ನು ಪೂರೈಸಲು ಜಿಲ್ಲಾಡಳಿತವು ಹೆಣಗಾಡುತ್ತಿದ್ದರೆ ಅತ್ತ ಇದೇ ಜಿಲ್ಲೆಯ ಅಹೇರಿ ಗ್ರಾಮದ ರೈತ ಅಯ್ಯೂಬ್ ನಾಗರಬಾವಡಿ ತನ್ನ ಕೊಳವೆ ಬಾವಿಯಿಂದ ಪ್ರತಿದಿನ ಸುಮಾರು 6,000 ಜನರಿಗೆ ಕುಡಿಯುವ ನೀರನ್ನು ಒದಗಿಸುವ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.
ಗ್ರಾಮ ಪಂಚಾಯತ್ ಈ ಹಿಂದೆ ಆರು ಕೊಳವೆ ಬಾವಿಗಳನ್ನು ಕೊರೆಸಿತ್ತು. ಇತ್ತೀಚಿಗೆ ಮತ್ತೆ ಎರಡು ಬಾವಿಗಳನ್ನು ಕೊರೆಸಿದೆ. ಆದರೆ ಯಾವುದರಲ್ಲೂ ನೀರಿಲ್ಲ. ತಿಂಗಳ ಹಿಂದೆ ತನ್ನ ಬಳಿಗೆ ಬಂದಿದ್ದ ಪಂಚಾಯತ್ ಸದಸ್ಯರು ನನ್ನ ಕೊಳವೆ ಬಾವಿಯಿಂದ ಗ್ರಾಮದ ಜನರಿಗೆ ನೀರು ಒದಗಿಸಲು ಸಾಧ್ಯವೇ ಎಂದು ಕೇಳಿಕೊಂಡಿದ್ದರು. ಇದಕ್ಕಾಗಿ ಹಣವನ್ನೂ ನೀಡುವುದಾಗಿ ತಿಳಿಸಿದ್ದರು. ಆದರೆ ನೀರನ್ನು ಉಚಿತವಾಗಿ ತೆಗೆದುಕೊಳ್ಳುವಂತೆ ಅವರಿಗೆ ತಿಳಿಸಿದ್ದೇನೆ. ಬರದ ಸಮಯದಲ್ಲಿ ಬಾಯಾರಿದವರಿಗೆ ನೀರನ್ನು ಕೊಡುವುದಕ್ಕಿಂತ ಹೆಚ್ಚು ಉತ್ತಮ ಸಾಮಾಜಿಕ ಸೇವೆಯಿಲ್ಲ ಎಂದು ಅಯ್ಯೂಬ್ ತಿಳಿಸಿದರು.
ನಾಲ್ಕು ಟ್ಯಾಂಕರ್‌ಗಳು ಪ್ರತಿ ದಿನ ಅಯ್ಯೂಬರ ಕೊಳವೆ ಬಾವಿಯಿಂದ 12 ಟ್ರಿಪ್‌ಗಳ ಮೂಲಕ ಗ್ರಾಮದ ನಿವಾಸಿಗಳಿಗೆ ನೀರೊದಗಿಸುತ್ತಿವೆ. ಅವರ ಮಾನವೀಯ ಗುಣದಿಂದಾಗಿ ಕಳೆದೊಂದು ತಿಂಗಳಿನಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮೀನಬಿ ಜತ್ಕರ್ ತಿಳಿಸಿದರು.





