ನೇತ್ರಾವತಿ ನದಿನೀರಿನ ಚರ್ಚೆ ಅಗತ್ಯ: ಯಡಿಯೂರಪ್ಪ

ಮಂಗಳೂರು, ಎ.24: ಕರಾವಳಿಯಲ್ಲಿಯೇ ಕುಡಿಯಲು ನೀರಿಲ್ಲ ಎಂದಾದ ಮೇಲೆ ನೇತ್ರಾವತಿ ನದಿ ನೀರಿನ ಬಳಕೆ ಬಗ್ಗೆ ಚರ್ಚೆ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹೋರಾಟಗಾರರೊಂದಿಗೆ ಶನಿವಾರ ರಾತ್ರಿ ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಮಾತುಕತೆ ನಡೆಸಿದ ಅವರು, ಕರಾವಳಿಯನ್ನು ಬರಡುಗೊಳಿಸುವ, ಬೇರೆಯವರಿಗೂ ಅನುಕೂಲವಾಗದ ಈ ಯೋಜನೆ ವಿರುದ್ಧ ನಾನೂ ಸರಕಾರಕ್ಕೆ ಮನವರಿಕೆ ಮಾಡುವುದಾಗಿ ಹೇಳಿದರು.
ಕೇಂದ್ರ ಸರಕಾರ ಯೋಜನೆಯ ಮುಂದಿನ ಹಂತಗಳಿಗೆ ಮಂಜೂರಾತಿ ನೀಡದಂತೆ ತಡೆಯಬೇಕು ಎಂಬ ಹೋರಾಟ ಗಾರರ ಬೇಡಿಕೆಗೆ ಸ್ಪಂದಿಸಿ ಮಾತನಾಡಿದ ಅವರು, ಈ ಬಗ್ಗೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.
ನೀರಾವರಿ ತಜ್ಞ ಎನ್‌ಐಟಿಕೆ ನಿವೃತ್ತ ಪ್ರೊಫೆಸರ್ ಎಸ್.ಜಿ.ಮಯ್ಯ ಎತ್ತಿನಹೊಳೆ ಯೋಜನೆಯಲ್ಲಿನ ತಪ್ಪು ಲೆಕ್ಕಾಚಾರಗಳನ್ನು ವಿವರಿಸಿ, ಯೋಜನೆ ಕಾರ್ಯಗತಗೊಂಡರೆ ಪಶ್ಚಿಮ ಘಟ್ಟದ ಮೇಲೆ ಆಗಬಹುದಾದ ದುಷ್ಪರಿಣಾಮದ ಬಗ್ಗೆ ವಿವರಿಸಿದರು. ಎಂ.ಜಿ.ಹೆಗ್ಡೆ ಮತ್ತು ರಾಮಚಂದ್ರ ಬೈಕಂಪಾಡಿ ಯೋಜನೆಯಲ್ಲಿರುವ ದೋಷಗಳ ಬಗ್ಗೆ ವಿವರಣೆ ನೀಡಿದರು.
ಸಂಸದ ನಳಿನ್ ಉಪಸ್ಥಿತಿಯಲ್ಲಿ ಸಮಿತಿ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ರಾಜೀವ್ ಅಂಚನ್, ಸತ್ಯಜಿತ್ ಸುರತ್ಕಲ್, ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು, ಸಿರಾಜ್ ಅಡ್ಕರೆ, ರಹೀಂ ಮುಂತಾದವರು ಉಪಸ್ಥಿತರಿದ್ದರು.





