ಎನ್ ಜಿ ಟಿ ಗೆ ಶ್ರೀ ಶ್ರೀ ನಾಮ : 4.75 ಕೋಟಿ ದಂಡ ಪಾವತಿಸಲು ಅಸಾಧ್ಯ ಎಂದ ಆರ್ಟ್ ಆಫ್ ಲಿವಿಂಗ್

ಹೊಸದಿಲ್ಲಿ, ಎ. 25: ಕಳೆದ ತಿಂಗಳು ಯಮುನಾ ನದಿ ತೀರದಲ್ಲಿ ಆಯೋಜಿಸಲಾದ ವಿಶ್ವ ಸಾಂಸ್ಕೃತಿಕ ಉತ್ಸವದ ಸಂದರ್ಭ ಪರಿಸರಕ್ಕೆ ಹಾನಿಗೈದಿದ್ದಕ್ಕಾಗಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ವಿಧಿಸಿದ್ದ ರೂ 4.75 ಕೋಟಿ ದಂಡವನ್ನು ಪಾವತಿಸಲು ತನಗೆ ಅಸಾಧ್ಯವೆಂದು ಆರ್ಟ್ ಆಫ್ ಲಿವಿಂಗ್ ಹೇಳಿದೆ. ಈ ಮೊತ್ತಕ್ಕೆ ಬ್ಯಾಂಕ್ ಗ್ಯಾರಂಟಿ ಮಾತ್ರ ತನಗೆ ಕೊಡಲು ಸಾಧ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.
ದೂರುದಾರ ಸಂಜಯ್ ಪಾರಿಖ್ ಅವರ ವಕೀಲರಾದ ಮನೋಜ್ ಮಿಶ್ರಾರ ಪ್ರಕಾರ ಆರ್ಟ್ ಆಫ್ ಲಿವಿಂಗಿಗೆ ಆರಂಭದಿಂದಲೂ ದಂಡವನ್ನು ಪಾವತಿಸುವ ಉದ್ದೇಶವೇ ಇರಲಿಲ್ಲ. ‘‘ಮೊದಲು ತಮ್ಮಲ್ಲಿ ದಂಡ ಪಾವತಿಸುವಷ್ಟು ಹಣವಿಲ್ಲವೆಂದು ಅವರು ನ್ಯಾಯಾಲಯಕ್ಕೆ ಹೇಳಿದರು. ಸಂಸ್ಕೃತಿ ಸಚಿವಾಲಯವು ಅವರಿಗೆ ಉತ್ಸವ ಆಯೋಜಿಸಲು ರೂ 1.5 ಕೋಟಿ ನೀಡಿದ್ದರೂ ಅವರು ಕೇವಲ ರೂ 25 ಲಕ್ಷ ದಂಡ ಪಾವತಿಸಿ ಕೈತೊಳೆದುಕೊಂಡಿದ್ದರು,’’ಎಂದು ಅವರು ಹೇಳಿದರು.
ಮಾರ್ಚ್ 9ರ ಎನ್ ಜಿ ಟಿ ಆದೇಶವನ್ನು ರದ್ದುಗೊಳಿಸಲೂ ಆರ್ಟ್ ಆಫ್ ಲಿವಿಂಗ್ ಯತ್ನಿಸುತ್ತಿದೆಯೆಂದುಪಾರಿಖ್ ಶಂಕೆ ವ್ಯಕ್ತಪಡಿಸಿದರು. ಯಮುನಾ ನದಿ ತೀರದಲ್ಲುಂಟಾದ ಪರಿಸರದ ಮೇಲಿನ ಹಾನಿಯ ಪ್ರಮಾಣವನ್ನುತಜ್ಞರ ಸಮಿತಿಯೊಂದು ಪರಿಶೀಲಿಸಲಿದೆಯೆಂದು ಎನ್ ಜಿ ಟಿ ಹೇಳಿರುವುದರಿಂದ ಆ ಸಮಿತಿಯ ವರದಿ ತನಗೆ ವಿರುದ್ಧವಾಗಲಿದೆಯೆಂದು ಅರಿವಿರುವ ಎಓಎಲ್ ಇದೀಗ ಸಮಿತಿಯ ಪರಿಶೀಲನೆಗೆ ಅಡ್ಡಿಯುಂಟು ಮಾಡುತ್ತಿದೆಯೆಂದೂ ಅವರು ಆರೋಪಿಸಿದರು.
ತರುವಾಯ ಪರಿಶೀಲನಾ ವರದಿಯಿನ್ನೂ ತಯಾರಾಗಿಲ್ಲವೆಂದು ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ ಹೇಳಿದೆ.
ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಅವರಿಗೆ ಇಸ್ಲಾಮಿಕ್ ಸ್ಟೇಟಿನಿಂದ ಬೆದರಿಕೆ ಕರೆಗಳು ಬರುತ್ತಿವೆಯೆಂದು ವರದಿಗಳು ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.







