ಸಮಾಜವಾದಿ ಪಕ್ಷ ಹೆದರಿದ್ದರಿಂದಲೇ ನನ್ನನ್ನು ಆಝಂಗಡ ತೆರಳದಂತೆ ತಡೆಯಲಾಯಿತು. ಉವೈಸಿ

ಆಝಂಗಡ, ಎಪ್ರಿಲ್ 25: ಸಮಾಜವಾದಿ ಪಾರ್ಟಿ ಮುಖ್ಯಸ್ಥ ಮುಲಾಯಮ್ ಸಿಂಗ್ ಯಾದವ್‌ರ ಸಂಸದೀಯ ಕ್ಷೇತ್ರ ಆಝಂಗಡಕ್ಕೆ ತೆರಳಲು ಅನುಮತಿ ನಿರಾಕರಸಿದ್ದಕ್ಕಾಗಿ ಕೊಪಗೊಂಡ ಆಲ್ ಇಂಡಿಯಾ ಮಜ್ಲಿಸ್ ಇತ್ತೇಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸದುದ್ದೀನ್ ಉವೈಸಿ ಇದಕ್ಕೆ ಸಮಾಜವಾದಿ ಪಕ್ಷ ಹೆದರಿದ್ದೇ ಕಾರಣ ಎಂದು ಟ್ವೀಟಿಸಿ ಟೀಕಿಸಿದ್ದಾರೆ.
"ಸಮಾಜವಾದಿ ಪಕ್ಷ ನನಗೆ ಜನರ ಸಭೆಯನ್ನು ನಡೆಸದಂತೆ ತಡೆಯುತ್ತಿದೆ. ನೆನಪಿರಲಿ ಅಖಿಲೇಶ್ ಸರಕಾರ ಶಾಶ್ವತವಾಗಿರುವುದಿಲ್ಲ. ನಾನು ಮತ್ತೆ ಬರುತ್ತೇನೆ. ನಾನು ಉತ್ತರ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ರೋಡ್ ಶೋ ಮಾಡಿದ್ದೇನೆ. ಈ ಸಂದರ್ಭದಲ್ಲಿ ನನಗೆ ಜನರ ವಿಶೇಷತಃ ಯುವಕರ ಬೆಂಬಲ ಸಿಕ್ಕಿದೆ. ಎಲ್ಲವೂ ಶಾಂತ ರೀತಿಯಲ್ಲಿ ನಡೆದಿದೆ. ಆದರೆ ನಾನು ಆಝಂಗಡಕ್ಕೆ ತೆರಳದಂತೆ ತಡೆಯಲಾಯಿತು. ಇದರಿಂದ ಸಮಾಜವಾದಿ ಪಕ್ಷ ಸ್ವಯಂ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿದೆ" ಎಂದು ಉವೈಸಿ ಹೇಳಿರುವುದಾಗಿ ವರದಿ ತಿಳಿಸಿದೆ.
ವರದಿಯಾಗಿರುವ ಪ್ರಕಾರ ಆಝಂಗಡದ ಮುಬಾರಕ್‌ಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಯಾಗಿದೆ ಎಂದು ಹೇಳಿ ಉವೈಸಿಯ ಸಭೆಯನ್ನು ತಡೆಯಲಾಗಿದೆ. ಆಝಂಗಡದ ಜಿಲ್ಲಾಧಿಕಾರಿ ಸುಹಾಸ್ ಎಲ್.ವೈ. ಪ್ರಕಾರ ಉವೈಸಿ ಪಾರ್ಟಿಯಿಂದ ಸಭೆ ನಡೆಸಲು ಅರ್ಜಿ ದೊರಕಿತ್ತು. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಕಾರಣದಿಂದ ಅನುಮತಿ ನಿರಾಕರಿಸಲಾಯಿತು ಎಂದು ತಿಳಿಸಿದ್ದಾರೆ. ಉವೈಸಿ ಸಿದ್ಧಾರ್ಥ್‌ನಗರದಲ್ಲಿ ಆಯೋಜಿಸಲಾದ ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರು ಸಿದ್ಧವಾಗಿರಬೇಕೆಂದು ಕರೆನೀಡಿದ್ದು ತನ್ನ ಪಕ್ಷದ ಅಭ್ಯರ್ಥಿಗಳು ವಿಧಾನಸಭೆಗೆ ಹೋಗುವಂತಾಗಬೇಕೆಂದು ಕಾರ್ಯಕರ್ತರಲ್ಲಿ ವಿನಂತಿಸಿದ್ದರು. ನಾವು ಯಾವುದೇ ಧರ್ಮದ ವಿರುದ್ಧವಿಲ್ಲ, ನಾವು ಯಾರ ವಿರುದ್ಧವೂ ಅಲ್ಲ ಎಂದು ಈ ಸಂದರ್ಭದಲ್ಲಿ ಉವೈಸಿ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.







