ಉದ್ಯೋಗ ವೀಸಾ ನೀಡದ ಮಾಲಕ : ದುಬೈಯಲ್ಲಿ ಜಿಮ್ ಗೆ ಬೆಂಕಿ ಹಚ್ಚಿದ ವಲಸಿಗ !

ದುಬೈ, ಎ. 25: ತನಗೆ ಉದ್ಯೋಗ ವೀಸಾ ನೀಡದ ಮಾಲಕನ ಮೇಲಿನ ಸಿಟ್ಟಿನಿಂದ ಜಿಮ್ ಗೆ ಬೆಂಕಿ ಹಚ್ಚಿದ ಈಜಿಪ್ಟ್ ನಾಗರಿಕನೊಬ್ಬ ಈಗ ಕೋರ್ಟ್ ಪ್ರಕರಣವನ್ನೆದುರಿಸುತ್ತಿದ್ದು ತೀರ್ಪು ಮೇ 24ರಂದು ಬರಲಿದೆ.
ಘಟನೆ ಫೆಬ್ರವರಿ 2ರಂದು ನಡೆದಿದ್ದು 27 ವರ್ಷದ ಈಜಿಪ್ಟ್ ನಾಗರಿಕ ಅಲ್ ಖ್ವೋರ್ ನಲ್ಲಿರುವ ಜಿಮ್ ನಲ್ಲಿದ್ದ ಕುರ್ಚಿ, ಬಟ್ಟೆಗಳು, ಟಿವಿ ಸೆಟ್ ಗಳು, ಲ್ಯಾಪ್ ಟಾಪ್, ಪ್ರಿಂಟರ್ ಮತ್ತಿತರ ವಸ್ತುಗಳಿಗೆ ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾಗಿ ಆರೋಪಿಸಲಾಗಿದ್ದು ಇದರಿಂದ ಜಿಮ್ ಮಾಲಕನಿಗೆ 1,56,000 ದಿರಮ್ಸ್ ನಷ್ಟವಾಗಿತ್ತೆನ್ನಲಾಗಿದೆ.
ಘಟನೆ ನಡೆದಾಗ ಸ್ಥಳದಲ್ಲಿದ್ದ ಭಾರತೀಯ ಸೆಕ್ಯುರಿಟಿ ಗಾರ್ಡ್ ಆರೋಪಿ ಜಿಮ್ ನಲ್ಲಿದ್ದ ವಸ್ತುಗಳಿಗೆ ಹಾನಿಗೊಳಿಸಿದ್ದನ್ನು ತಾನು ನೋಡಿದ್ದೇನೆ, ಎಂದು ಹೇಳಿದ್ದಾನೆ. ‘‘ಮೊದಲು ಟಿವಿ, ಕುರ್ಚಿಗಳು ಹಾಗೂ ಗಾಜನ್ನು ಹುಡಿಗಟ್ಟಿದ ಆತ ಯಾವುದೋ ದ್ರವವನ್ನು ಸುರಿದು ಬೆಂಕಿ ಹಚ್ಚಿದ. ಆತನನ್ನು ತಡೆಯಲು ನನಗೆ ಅಸಾಧ್ಯವಾಗಿ ನಾನು ಪೊಲೀಸರಿಗೆ ಕರೆ ಮಾಡಿದೆ,’’ಎಂದು ಸುರಕ್ಷಾ ಸಿಬ್ಬಂದಿ ಹೇಳಿದ್ದಾರೆ.
‘‘ಆತ ವಿಸಿಟ್ ವೀಸಾ ಪಡೆದು ಬಂದಿದ್ದು ಮ್ಯಾನೇಜರ್ ಜತೆ ಸ್ವಲ್ಪ ಸಮಯ ಕೆಲಸ ಮಾಡಿದ್ದ. ನಂತರ ಮ್ಯಾನೇಜರ್ ತನಗೆ ಖಾಯಂ ವೀಸಾ ನೀಡಲು ಸಹಕರಿಸದಿದ್ದಾಗ ಕೊಪಗೊಂಡು ಈ ಕೃತ್ಯವೆಸಗಿದ್ದೇನೆಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.







