ಉಮ್ರಾ ಯಾತ್ರಿಗಳಿನ್ನು ಸೌದಿಯಿಡೀ ಪ್ರಯಾಣಿಸಬಹುದು !

ರಿಯಾದ್, ಎ. 25: ಉಮ್ರಾ ಯಾತ್ರಿಗಳು ತಮ್ಮ ವೀಸಾಗಳನ್ನು ಟೂರಿಸ್ಟ್ ವೀಸಾಗಳಾಗಿ ಪರಿವರ್ತಿಸಿ ಸೌದಿ ರಾಷ್ಟ್ರವಿಡೀ ಪ್ರಯಾಣಿಸಲು ಅನುಮತಿಸುವ ಯೋಜನೆಯೊಂದನ್ನು ಸೌದಿ ಪ್ರವಾಸೋದ್ಯಮ ಹಾಗೂ ರಾಷ್ಟ್ರೀಯ ಪಾರಂಪರಿಕ ಆಯೋಗದ ಅಧ್ಯಕ್ಷರಾಗಿರುವ ರಾಜಕುಮಾರ ಸುಲ್ತಾನ್ ಬಿನ್ ಸಲ್ಮಾನ್ ರವಿವಾರ ಜಾರಿಗೊಳಿಸಿದರು.
‘ದಿ ಕಿಂಗ್‌ಡಮ್ ಈಸ ಮುಸ್ಲಿಮ್ಸ್ ಡೆಸ್ಟಿನೇಶನ್’ ಅನ್ವಯ ಹಲವಾರು ವರ್ಷಗಳ ಹಿಂದೆಯೇ ಈ ಯೋಜನೆಯನ್ನು ತಯಾರಿಗೊಳಿಸಲಾಗಿತ್ತು. ದೇಶದ ಪ್ರಮುಖ ಪ್ರವಾಸೋದ್ಯಮ ಹಾಗೂ ಐತಿಹಾಸಿಕ ಸ್ಥಳಗಳನ್ನು, ಶಾಪಿಂಗ್ ಸೆಂಟರುಗಳು ಹಾಗೂ ಮಾಲ್ ಗಳನ್ನು ಸಂದರ್ಶಿಸುವ ಅವಕಾಶವನ್ನು ಈ ಯೋಜನೆಯ ಮೂಲಕ ಉಮ್ರಾ ಯಾತ್ರಾರ್ಥಿಗಳಿಗೆ ನೀಡಲಾಗುವುದೆಂದು ಸೌದಿ ರಾಜ ಕುಮಾರ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರೆಂದು ಸೌದಿಯ ಅಧಿಕೃತ ಸುದ್ದಿ ಸಂಸ್ಥೆ ಎಸ್ ಪಿ ಎ ವರದಿ ಮಾಡಿದೆ.
ಉಮ್ರಾ ಯಾತ್ರೆ ಮುಗಿಸಿದ ಬಳಿಕ ಜನರು ಸಾಂಸ್ಕೃತಿಕ, ಶೈಕ್ಷಣಿಕ, ವೈದ್ಯಕೀಯ ಯಾ ಮಾರ್ಕೆಟಿಂಗ್ ಟೂರ್ ಗಳಿಗೆ ಹೋಗಬಹುದು ಹಾಗೂ ವಸ್ತು ಪ್ರದರ್ಶನ ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಬಹುದು, ಎಂದು ರಾಜಕುಮಾರ ಸಲ್ಮಾನ್ ತಿಳಿಸಿದ್ದಾರೆ.
ಆಂತರಿಕ, ವಿದೇಶಾಂಗ ವ್ಯವಹಾರಗಳು ಹಾಗೂ ಹಜ್ ಸಚಿವಾಲಯದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ತಿಳಿದು ಬಂದಿದೆ.
ಉಮ್ರಾ ವೀಸಾವನ್ನು ಟೂರಿಸ್ಟ್ ವೀಸಾ ಆಗಿ ಪರಿವರ್ತಿಸುವ ಪ್ರಕ್ರಿಯೆಗಳು ಇನ್ನಷ್ಟೇ ತಯಾರಾಗಬೇಕಿದೆಯೆಂದು ಹೇಳಲಾಗಿದೆ.







