ತಾಯಿಗಾಗಿ 55 ಅಡಿ ಆಳದ ಬಾವಿ ತೋಡಿದ 17 ವರ್ಷದ ಪವನ್ !
ಸಾಗರದಲ್ಲೊಬ್ಬ ಆಧುನಿಕ ಭಗೀರಥ

ಶಿವಮೊಗ್ಗ , ಎ. 25: ತನ್ನ ಪತ್ನಿ ಫ಼ಲ್ಗುಣಿ ದೇವಿಯ ನೆನಪಿಗೆ ಗುಡ್ಡವನ್ನೇ ಅಗೆದು 360 ಅಡಿಗಳ ದಾರಿ ನಿರ್ಮಿಸಿದ ದಶರಥ ಮಾಂಜಿ ಕುರಿತ ಸಿನೆಮಾ ನೋಡಿದ್ದೀರಲ್ಲ. ಈಗ ಇಲ್ಲೇ ನಮ್ಮ ಸಾಗರದ ಹೊಸ ಭಗೀರಥನೊಬ್ಬನ ಸಾಹಸದ ಕತೆ ಕೇಳಿ.
ಸಾಗರ ತಾಲೂಕಿನ ಸೆತ್ತಿಸರ ಗ್ರಾಮದ 17 ವರ್ಷದ ಪವನ್ ಕುಮಾರ್ 55 ಅಡಿ ಆಳದ ಬಾವಿ ತೋಡಿದ್ದಾನೆ !
ಪ್ರತಿರಾತ್ರಿ ಕೆಲಸದಿಂದ ಬಂದ ಮೇಲೆ ತನ್ನ ತಾಯಿ ಸುಮಾರು ಅರ್ಧ ಕಿಲೋ ಮೀಟರ್ ದೂರದ ಸಾರ್ವಜನಿಕ ಬಾವಿಗೆ ಹೋಗಿ ನೀರು ಸೇದಿ ತರುವ ಕಷ್ಟ ನೋಡಲಾರದೆ ಈ ಅಸಾಮಾನ್ಯ ಮಗ ದೊಡ್ಡ ಸಾಹಸವನ್ನೇ ಮಾಡಿದ್ದಾನೆ. ಈತನ ತಂದೆ ವಿನಾಯಕ್ ಹೆಗ್ಡೆ ಅಡುಗೆ ಕೆಲಸ ಮಾಡುತ್ತಿದ್ದು ತಾಯಿ ಸಾಗರದಲ್ಲಿ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ದುಡಿಯುತ್ತಿದ್ದಾರೆ. ಬಡತನದಿಂದಾಗಿ ಮನೆಯಲ್ಲೇ ಬಾವಿ ತೋಡಲು ಇವರಿಗೆ ಸಾಧ್ಯವಾಗಿರಲಿಲ್ಲ.
"ತಾಯಿಯ ಕಷ್ಟ ನೋಡಲಾರದೆ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಬಾವಿ ತೋಡಲು ನಿರ್ಧರಿಸಿದೆ " ಎಂದು ಹೇಳುತ್ತಾನೆ ಪವನ್.
ಸ್ಥಳೀಯ ಕಣ್ಣಪ್ಪ ಎಂಬವರ ಸಹಾಯದಿಂದ ಸ್ಥಳ ಗುರುತು ಮಾಡಿ ಪವನ್ ಬಾವಿ ತೋಡಲು ಕಳೆದ ಫೆಬ್ರವರಿ 26 ರಂದು ಪ್ರಾರಂಭಿಸಿಯೇ ಬಿಟ್ಟ. ಕೆಲಸಕ್ಕೆ ಜನ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ತಂದೆ ತಾಯಿ ಹೇಗೂ ಇರಲಿಲ್ಲ. ಹಾಗಾಗಿ ಒಬ್ಬನೇ ಕೆಲಸ ಮುಂದುವರಿಸಿದ ಪವನ್ ಮಾರ್ಚ್ ನಲ್ಲಿ ಹತ್ತು ದಿನ ಪಿಯು ಪರೀಕ್ಷೆಗಾಗಿ ಕೆಲಸ ನಿಲ್ಲಿಸಿದ.
45 ದಿನಗಳ ಕಟಿಣ ಪರಿಶ್ರಮದ ಬಳಿಕ ಎಪ್ರಿಲ್ 20ಕ್ಕೆ 53 ಅಡಿ ಆಳದಲ್ಲಿ ನೀರು ಸಿಕ್ಕಿತು !
:" ಬಂಡೆ ಕಲ್ಲುಗಳಿದ್ದಲ್ಲಿ ಅಗೆಯುವುದು ಬಹಳ ಕಷ್ಟವಾಯಿತು. ಆದರೆ ನೀರು ಸಿಕ್ಕಿದ ಆ ಕ್ಷಣ ನನಗೆ ಅತ್ಯಂತ ಸಂತಸ , ತೃಪ್ತಿ ತಂದಿತು. ಕೊನೆಗೂ ನನ್ನ ತಾಯಿಯ ಕಷ್ಟ ನೀಗುವ ಸಮಯ ಬಂದಿದೆ. " ಎಂದು ಸಂತಸ ವ್ಯಕ್ತಪಡಿಸಿದ್ದಾನೆ ಪವನ್. 55 ಅಡಿವರೆಗೆ ಅಗೆದು ಕೆಲಸ ಪೂರ್ಣಗೊಳಿಸಿದ್ದಾನೆ ಪವನ್.
Courtesy: The Hindu







