ಕೋಡಿಂಬಾಳ: ಬಿಸಿಲಿನ ತಾಪಕ್ಕೆ ವ್ಯಕ್ತಿ ಬಲಿ
ಉಪ್ಪಿನಂಗಡಿ: ಬಿಸಿಲ ತಾಪ ದಿನೇ ದಿನೇ ಹೆಚ್ಚುತ್ತಿದ್ದು ಕೋಡಿಂಬಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬಿಸಿಲ ತಾಪಕ್ಕೆ ಬಲಿಯಾದ ಘಟನೆ ನಡೆದಿದೆ. ಕೋಡಿಂಬಾಳ ಗ್ರಾಮದ ಮುಳಿಯ ನಿವಾಸಿ ದಿಂಡ ಗೌಡ(68) ಬಿಸಿಲಿನ ಬೇಗೆ ತಾಳಲಾರದೆ ಕುಸಿದು ಬಿದ್ದು ಮೃತಪಟ್ಟವರು
ಮನೆ ಮಂದಿಯೆಲ್ಲಾ ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಗೌಡರು ಪೇಟೆಗೆ ಹೊರಟಿದ್ದರು. ಮನೆಯಿಂದ ಕಡಬ ಪೇಟೆಗೆ ನಡೆದುಕೊಂಡು ಬರುತ್ತಿದ್ದಾಗ ದಾರಿ ಮಧ್ಯೆ ಈ ಘಟನೆ ನಡೆದಿದೆ. ದಾರಿಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು 108 ವಾಹನಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದರು. 108 ವಾಹನ ಸ್ಥಳಕ್ಕೆ ಬರುವ ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿ ಮೃತ ದೇಹದ ಮೇಲೆ ಇರುವೆಗಳು ಮುತ್ತಿಕೊಂಡಿದ್ದವು. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೆನ್ಸ್ ಮೂಲಕ ತರಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು. ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಮೃತರು ಬಿಸಿಲಬೇಗೆ ತಾಳಲಾರದೆ ಹೃದಯಾಘಾತವಾಗಿ ಮೃತಪಟ್ಟಿರಬಹುದೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.





