ಉತ್ತರಾಖಂಡ,ಅರುಣಾಚಲ ಕುರಿತು ಸಂಸತ್ತಿನಲ್ಲಿ ಕೋಲಾಹಲ

ಹೊಸದಿಲ್ಲಿ,ಎ.25: ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯಿಂದ ಕ್ರುದ್ಧ ಕಾಂಗ್ರೆಸ್ ಸೋಮವಾರ ಸಂಸತ್ತಿನಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು.ಮೋದಿ ಸರಕಾರವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರಗಳನ್ನು ಬುಡಮೇಲುಗೊಳಿಸುತ್ತಿದೆ ಎಂಬ ಅದರ ಆರೋಪವನ್ನು ಗೃಹಸಚಿವ ರಾಜನಾಥ ಸಿಂಗ್ ಅವರು ತಿರಸ್ಕರಿಸಿದರು.
ರಾಷ್ಟ್ರಪತಿ ಆಡಳಿತ ಹೇರಿಕೆ ವಿವಾದವು ಅಧಿವೇಶನದ ಮೊದಲ ದಿನ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಾವೇರಿದ ವಾತಾವರಣವನ್ನು ಸೃಷ್ಟಿಸಿತು. ಉಭಯ ಸದನಗಳಲ್ಲಿ ಕಾಂಗ್ರೆಸ್ ಸದಸ್ಯರು ಸದನ ಬಾವಿಗೆ ಲಗ್ಗೆ ಹಾಕಿ ಘೋಷಣೆಗಳನ್ನು ಕೂಗಿದರು. ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರೂ ಅವರೊಂದಿಗೆ ಧ್ವನಿಗೂಡಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಸಹಸದಸ್ಯರು ರಾಷ್ಟ್ರಪತಿ ಆಡಳಿತ ಹೇರಿಕೆಗೆ ಸಂಬಂಧಿಸಿದಂತೆ ತಾವು ಸಲ್ಲಿಸಿದ್ದ ನಿಲುವಳಿ ಸೂಚನೆ ತಿರಸ್ಕೃತಗೊಂಡಿದ್ದರಿಂದ ಸದನದ ಬಾವಿಯಲ್ಲಿ ನೆರೆದು ಧರಣಿ ನಡೆಸಿದರು. ಅವರೊಂದಿಗೆ ಜೆಡಿಯು ಮತ್ತು ಆಪ್ ಸದಸ್ಯರೂ ಸೇರಿದ್ದರು.
ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಲೋಕಸಭೆಯು ಬೆಳಿಗ್ಗೆ ಸಮಾವೇಶಗೊಂಡಾಗ ಹೇಳಿದ ಖರ್ಗೆ,ತಾನು ಈ ಸಂಬಂಧ ನಿಲುವಳಿ ಸೂಚನೆಯನ್ನು ಸಲ್ಲಿಸಿರುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ ಅವರಿಗೆ ತಿಳಿಸಿದರು.
ತನ್ಮಧ್ಯೆ ಖರ್ಗೆಯವರಿಗೆ ತನ್ನ ಹೇಳಿಕೆಯನ್ನು ನೀಡಲು ಅವಕಾಶ ಕಲ್ಪಿಸುವಂತೆ ಆಪ್ ನಾಯಕ ಭಗವಂತ್ ಮಾನ್ ಅವರು ಸ್ಪೀಕರ್‌ಗೆ ಪದೇಪದೇ ಮನವಿ ಮಾಡಿಕೊಳ್ಳುತ್ತಿದ್ದುದು ಕಂಡು ಬಂದಿತು.
ಆಡಳಿತ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆಯೇ ಖರ್ಗೆ, ಕೇಂದ್ರ ಸರಕಾರವು ‘ಸಂವಿಧಾನವನ್ನು ಕೊಲ್ಲುವ ಮೂಲಕ ’ಬಿಜೆಪಿ ಸರಕಾರವನ್ನು ಸ್ಥಾಪಿಸಲು ಶಾಸಕರನ್ನು ಖರೀದಿಸುತ್ತಿದೆ ಮತ್ತು ಅವರ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
ವಿಷಯವು ಸರ್ವೋಚ್ಚ ನ್ಯಾಯಾಲಯದ ಮುಂದಿದೆ ಎಂದು ಖರ್ಗೆಯವರಿಗೆ ಸೂಚಿಸಿದ ಸ್ಪೀಕರ್,ಈ ವಿಷಯದಲ್ಲಿ ಮುಂದೆ ಮಾತನಾಡದಂತೆ ಸೂಚಿಸಿದರು.
ತಾನು ಕೇಂದ್ರ ಸರಕಾರದ ಕ್ರಮವನ್ನು ಪ್ರಸ್ತಾಪಿಸುತ್ತಿದ್ದೆನೆಯೇ ಹೊರತು ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಅಲ್ಲ ಎಂದ ಖರ್ಗೆ,ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಸಂವಿಧಾನ ದಿನ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಗಳನ್ನು ಆಚರಿಸುತ್ತದೆ ಮತ್ತು ಇದೇ ವೇಳೆ ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸಿದೆ. ಎನ್‌ಡಿಎ ಪ್ರತಿಯೊಂದೂ ರಾಜ್ಯದಲ್ಲಿ ಅಧಿಕಾರವನ್ನು ಕಸಿದುಕೊಳ್ಳುವ ತೀರ ಅವಸರದಲ್ಲಿರುವಂತಿದೆ. ಸಂವಿಧಾನವೆನ್ನುವುದು ಇದೆ ಎನ್ನುವುದನ್ನು ಮರೆಯಬೇಡಿ. ಮಾರ್ಚ್ 28ರಂದು ಸದನದಲ್ಲಿ ಬಲಾಬಲ ಪರೀಕ್ಷೆಯವರೆಗೂ ಕಾಯಬಹುದಿತ್ತು, ಆದರೆ ಕೇಂದ್ರವು ಮಾ.27ರಂದೇ ರಾಷ್ಟ್ರಪತಿ ಆಡಳಿತವನ್ನು ಹೇರಿದೆ ಎಂದರು.
ಸದನವು ಇತ್ತೀಚಿಗಷ್ಟೇ ಇಷ್ರತ್ ಜಹಾನ್ ನಕಲಿ ಎನ್‌ಕೌಂಟರ್ ಬಗ್ಗೆ ಚರ್ಚಿಸಿತ್ತು ಮತ್ತು ಅದೂ ಕೂಡ ವಿಚಾರಣಾಧೀನವಾಗಿತ್ತು ಎಂದು ಅವರು ಬೆಟ್ಟು ಮಾಡಿದರು.
ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳಲ್ಲಿನ ಬಿಕ್ಕಟ್ಟನ್ನು ಎನ್‌ಡಿಎ ಅಥವಾ ಬಿಜೆಪಿ ಸೃಷ್ಟಿಸಿದ್ದಲ್ಲ. ಅದು ಅವರ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಎಂದು ಗೃಹಸಚಿವ ರಾಜನಾಥ ಸಿಂಗ್ ಹೇಳಿದರು.
ಅತ್ತ ರಾಜ್ಯಸಭೆಯಲ್ಲಿ ವಿಷಯವನ್ನೆತ್ತಿದ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು, ಸದನವು ಕಲಾಪ ನಡೆಸದಂತೆ ಕೇಂದ್ರ ಸರಕಾರವು ಉದ್ದೇಶಪೂರ್ವಕವಾಗಿ ಪ್ರತಿಪಕ್ಷವನ್ನು ಪ್ರಚೋದಿಸುತ್ತಿದೆ ಮತ್ತು ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದರು.







