ವಿಶನ್ 2030 ಕ್ಕೆ ಸೌದಿ ಸಂಪುಟ ಅನುಮೋದನೆ
ತೈಲ ಆದಾಯದ ಮೇಲಿನ ಅವಲಂಬನೆ ಕಡಿಮೆ ಮಾಡುವ ಆರ್ಥಿಕ ಯೋಜನೆ

ರಿಯಾದ್, ಎ. 25: ಆರ್ಥಿಕ ಮತ್ತು ಅಭಿವೃದ್ಧಿ ವ್ಯವಹಾರಗಳ ಮಂಡಳಿ (ಸಿಇಡಿಎ) ಅಭಿವೃದ್ಧಿಪಡಿಸಿದ ದೇಶದ ‘‘ವಿಶನ್ 2030’’ (ಸೌದಿ 2030ರ ಮುನ್ನೋಟ)ಕ್ಕೆ ಸೌದಿ ಅರೇಬಿಯ ಸಚಿವ ಸಂಪುಟ ಅಂಗೀಕಾರ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ದೊರೆ ಸಲ್ಮಾನ್, ಈ ಯೋಜನೆಯನ್ನು ರೂಪಿಸುವಲ್ಲಿ ಸಿಇಡಿಎ ಪಟ್ಟ ಶ್ರಮವನ್ನು ಕೊಂಡಾಡಿದರು. ಇದನ್ನು ಅನುಷ್ಠಾನಗೊಳಿಸುವಲ್ಲಿ ಜೊತೆಯಾಗಿ ಕೆಲಸ ಮಾಡುವಂತೆ ಅವರು ನಾಗರಿಕರಿಗೆ ಕರೆ ನೀಡಿದರು.
ಸೌದಿ ಅರೇಬಿಯದ ‘2030ರ ಮುನ್ನೋಟ’ದ ಕರಡಿನ ಪರಿಶೀಲನೆಗಾಗಿ ಸಚಿವ ಸಂಪುಟ ಸೋಮವಾರದ ಇಡೀ ದಿನವನ್ನು ಮೀಸಲಿಟ್ಟಿತು.
ಬಳಿಕ ಅಲ್ ಅರೇಬಿಯ ಸುದ್ದಿ ಚಾನೆಲ್‌ಗೆ ಸಂದರ್ಶನವೊಂದನ್ನು ನೀಡಿದ ಸೌದಿ ಅರೇಬಿಯದ ಉಪ ಯುವರಾಜ, ರಕ್ಷಣಾ ಸಚಿವ ಹಾಗೂ ಸಿಇಡಿಎ ಮುಖ್ಯಸ್ಥ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್, ದೇಶದ ಸರಕಾರಿ ಸ್ವಾಮ್ಯದ ತೈಲ ಉತ್ಪಾದಕ ದೈತ್ಯ ಸೌದಿ ಅರಾಮ್ಕಾದ ಶೇಕಡ 5ಕ್ಕಿಂತಲೂ ಕಡಿಮೆ ಶೇರುಗಳನ್ನು ಸಾರ್ವಜನಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
ಅರಾಮ್ಕ ಅಲ್ಲ, ನಿರ್ದೇಶಕರ ಮಂಡಳಿಯ ಉಸ್ತುವಾರಿಯಲ್ಲಿ ಎರಡು ಲಕ್ಷ ಕೋಟಿ ಡಾಲರ್ ಸಂಪತ್ತು ನಿಧಿಯೊಂದನ್ನು ಸ್ಥಾಪಿಸುವ ಯೋಜನೆಯೊಂದರ ಬಗ್ಗೆಯೂ ಅವರು ಚರ್ಚಿಸಿದರು. ಈ ನಿಧಿಯ ಆದಾಯವನ್ನು ಸೌದಿ ಅರೇಬಿಯದ ನಗರಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುವುದು.
ತೈಲದ ಮೇಲೆ ದೇಶದ ಅವಲಂಬನೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದು, ಖಾಸಗೀಕರಣಗಳಿಗೆ ಒತ್ತು ನೀಡುವುದು, ಸಬ್ಸಿಡಿಗಳನ್ನು ಇನ್ನಷ್ಟು ಕಡಿತಗೊಳಿಸುವುದು, ಅರಾಮ್ಕಿದ ಸ್ವಲ್ಪ ಭಾಗ ಶೇರುಗಳ ಮಾರಾಟ ಮತ್ತು 2 ಲಕ್ಷ ಕೋಟಿ ಮೊತ್ತದ ಸಂಪತ್ತು ನಿಧಿಯ ಸ್ಥಾಪನೆ- ಮುಂತಾದ ಯೋಜನೆಗಳು ‘ಸೌದಿ 2030ರ ಮುನ್ನೋಟ’ದ ಪ್ರಮುಖ ಅಂಶಗಳು.







