ಡ್ರಾಪ್ ನೀಡುವ ನೆಪದಲ್ಲಿ ಲಕ್ಷಾಂತರ ರೂ. ದರೋಡೆ
ಶಿವಮೊಗ್ಗ,ಎ.25: ವಿಪರೀತ ಪ್ರಮಾಣದಲ್ಲಿ ಮದ್ಯ ಸೇವಿಸಿ ಕಾರು ಚಾಲನೆ ಮಾಡಲಾಗದ ಸ್ಥಿತಿಯಲ್ಲಿದ್ದ ಬ್ಯಾಂಕ್ ಮ್ಯಾನೇಜರ್‌ರೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಆಗಮಿಸಿದ ಆಗಂತುಕರ ತಂಡವೊಂದು, ಮನೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ನಗನಾಣ್ಯ ಹಾಗೂ ಕಾರು ಅಪಹರಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ನಗರದ ಖಾಸಗಿ ಬ್ಯಾಂಕ್‌ವೊಂದರಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೇ ದರೋಡೆಗೊಳಗಾದವರೆಂದು ಗುರುತಿಸಲಾಗಿದೆ. ಅವರ ಬಳಿಯಿದ್ದ ಚಿನ್ನದ ಉಂಗುರ, ಸರ, ಪರ್ಸ್‌ನಲ್ಲಿದ್ದ ಸಾವಿರಾರು ನಗದು ಹಾಗೂ ಸ್ಯಾಂಟ್ರೋ ಕಾರನ್ನು ದರೋಡೆಕೋರರು ಅಪಹರಿಸಿದ್ದಾರೆ. ಇವುಗಳ ವೌಲ್ಯ ಸರಿಸುಮಾರು 3.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತಂತೆ ಅವರು ಪೊಲೀಸರಿಗೆ ತಡವಾಗಿ ದೂರು ನೀಡಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆ ಹಿನ್ನೆಲೆ: ಕಳೆದ ಶನಿವಾರ ರಾತ್ರಿ ನಗರದ ಎನ್.ಟಿ.ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ದೂರುದಾರ ಬ್ಯಾಂಕ್ ಮ್ಯಾನೇಜರ್‌ರವರು ಮದ್ಯ ಸೇವಿಸಿದ್ದಾರೆ. ತದನಂತರ ಮದ್ಯದ ನಶೆ ಹೆಚ್ಚಾಗಿ ಕಾರು ಚಾಲನೆ ಮಾಡಲು ಸಾಧ್ಯವಾಗದೆ ಬಾರ್ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರು ಬಳಿ ನಿಂತುಕೊಂಡಿದ್ದಾರೆ. ಇವರ ಚಲನವಲನ ಗಮನಿಸುತ್ತಿದ್ದ ಆಗಂತುಕರ ತಂಡವು ಸಹಾಯ ಮಾಡುವ ನೆಪದಲ್ಲಿ ಆಗಮಿಸಿದೆ. ಜಯನಗರ ಬಡಾವಣೆಯಲ್ಲಿರುವ ಮನೆಗೆ ಸುರಕ್ಷಿತವಾಗಿ ಬಿಡುವುದಾಗಿ ಹೇಳಿ ಅವರ ಕಾರಿನ ಕೀ ಪಡೆದುಕೊಂಡು, ಅವರನ್ನು ಕೂರಿಸಿಕೊಂಡು ಹೊರಟಿದ್ದಾರೆ. ತದನಂತರ ಮಾರ್ಗಮಧ್ಯದಲ್ಲಿಯೇ ಅವರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ, ಅವರ ಬಳಿಯಿದ್ದ ನಗನಾಣ್ಯ ಕಸಿದುಕೊಂಡಿದ್ದು, ತದನಂತರ ಕಾರಿನಿಂದ ಹೊರತಳ್ಳಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.





