ಶೂಟಿಂಗ್ ವಿಶ್ವಕಪ್: ಭಾರತದ ಅಹ್ಮದ್‌ಖಾನ್‌ಗೆ ಬೆಳ್ಳಿ

ಹೊಸದಿಲ್ಲಿ, ಎ.25: ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್)ವಿಶ್ವಕಪ್‌ನ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮೀರಾಜ್ ಅಹ್ಮದ್ ಬೆಳ್ಳಿ ಪದಕವನ್ನು ಜಯಿಸಿ ಗಮನ ಸೆಳೆದಿದ್ದಾರೆ.
ರವಿವಾರ ರಾತ್ರಿ ಒಲಿಂಪಿಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ನಡೆದ ಫೈನಲ್ ಸುತ್ತಿನಲ್ಲಿ ಅಹ್ಮದ್‌ಖಾನ್ ಸ್ವೀಡನ್‌ನ ಮಾರ್ಕಸ್ ಸ್ವೆನ್ಸನ್ ವಿರುದ್ಧ ಸಮಬಲದ ಹೋರಾಟ ನೀಡಿದರೂ ಅಂತಿಮ ಟೈ-ಬ್ರೇಕರ್‌ನಲ್ಲಿ 2-1 ಸೆಟ್‌ಗಳ ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಇದಕ್ಕೆ ಮೊದಲು ಅರ್ಹತಾ ಸುತ್ತಿನಲ್ಲಿ 125ರಲ್ಲಿ 122 ಅಂಕವನ್ನು ಗಳಿಸಿದ್ದ ಮೀರಾಜ್ ಅಹ್ಮದ್ ಎರಡನೆ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು. ಸೆಮಿ ಫೈನಲ್ ಹಂತದ ಮೊದಲ ಸ್ಪರ್ಧೆಯಲ್ಲಿ 16ರಲ್ಲಿ 15 ಅಂಕವನ್ನು ಗಳಿಸಿದ್ದ ಮೀರಾಜ್ ಅಹ್ಮದ್ ಹಾಗೂ ಮಾರ್ಕಸ್ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಹೋರಾಡುವ ಅರ್ಹತೆ ಪಡೆದಿದ್ದರು.
13 ವರ್ಷಗಳ ಹಿಂದೆ ಶೂಟಿಂಗ್ ವೃತ್ತಿಜೀವನವನ್ನು ಆರಂಭಿಸಿದ ಉತ್ತರ ಪ್ರದೇಶ ಮೂಲದ ಮೀರಾಜ್ ಅಹ್ಮದ್ ಕಳೆದ 26 ಪ್ರಯತ್ನದಲ್ಲಿ ಇದೇ ಮೊದಲ ಬಾರಿ ಶೂಟಿಂಗ್ ವಿಶ್ವಕಪ್ ನಲ್ಲಿ ಫೈನಲ್‌ಗೆ ತಲುಪಿದ್ದರು.
ಅಹ್ಮದ್ ವಿಶ್ವಕಪ್‌ನ ಶೂಟಿಂಗ್‌ನ ಸ್ಕೀಟ್ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಮೊದಲ ಶೂಟರ್ ಎನಿಸಿಕೊಂಡರು. ಅಹ್ಮದ್ ಕಳೆದ ವರ್ಷ ಸ್ಕೀಟ್ ಶೂಟಿಂಗ್ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತದ ಮೊದಲ ಶೂಟರ್ ಎನಿಸಿಕೊಂಡಿದ್ದರು.







