ಬಿಸಿಸಿಐ ಯುವಕರಿಗೆ ಸಮಾನ ಅವಕಾಶ ನೀಡುತ್ತಿಲ್ಲ:ಸುಪ್ರೀಂಕೋರ್ಟ್ ತರಾಟೆ

ಹೊಸದಿಲ್ಲಿ, ಎ.25: ದೇಶದ ಹಲವು ಯುವಕರು ಧೋನಿ ಹಾಗೂ ಕೊಹ್ಲಿ ಅವರಂತೆ ಉತ್ತಮ ಆಟಗಾರನಾಗುವ ಕನಸು ಹೊಂದಿದ್ದಾರೆ. ಆದರೆ, ಬಿಸಿಸಿಐ ಅವರಿಗೆ ಸಮಾನ ಅವಕಾಶವನ್ನೇ ನೀಡುತ್ತಿಲ್ಲ ಎಂದು ಸೋಮವಾರ ತನ್ನ ತೀರ್ಪಿನಲ್ಲಿ ಹೇಳಿರುವ ಸುಪ್ರೀಂಕೋರ್ಟ್, ದೇಶದ ಕ್ರಿಕೆಟ್‌ನಲ್ಲಿ ಬಿಸಿಸಿಐನ ಏಕಸ್ವಾಮ್ಯ ನೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕ್ರಿಕೆಟ್‌ನಲ್ಲಿರುವ ಗ್ಲಾಮರ್ ಹಾಗೂ ವೈಭವವನ್ನು ನೋಡಿ ದೇಶದ ಹಲವು ಯುವಕರು ಕ್ರಿಕೆಟ್‌ನ್ನು ವೃತ್ತಿಯಾಗಿ ಸ್ವೀಕರಿಸಿ ಒಂದು ದಿನ ಕೊಹ್ಲಿ ಹಾಗೂ ಧೋನಿಯಂತಾಗುವ ಕನಸು ಕಾಣುತ್ತಿದ್ದಾರೆ. ಆದರೆ, ದೇಶಾದ್ಯಂತ ಬಿಸಿಸಿಐನ ಏಕಪಕ್ಷೀಯ ಹಾಗೂ ನಿರ್ಬಂಧಾತ್ಮಕ ನಿರ್ಧಾರದಿಂದಾಗಿ ಯುವಕರು ಸಮಾನ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.ಆಟಗಾರರು ಕ್ರಿಕೆಟ್ ಆಡಬೇಕಾದರೆಆತ ನಿಮ್ಮಿಂದಿಗೆ ಇರಬೇಕು. ನಿಮ್ಮದು ಸಂಪೂರ್ಣ ಏಕಸ್ವಾಮ್ಯ ನಿಲುವು. ಜನ ಸಾಮಾನ್ಯರು ಸದಸ್ಯರಾಗದಂತೆ ನೀವು ತಡೆಯುತ್ತೀರಿ ಎಂದು ಜಸ್ಟಿಸ್ ಟಿಎಸ್ ಠಾಕೂರ್ ಅವರಿದ್ದ ನ್ಯಾಯ ಪೀಠ ಹೇಳಿದೆ.
ಈ ವಿಷಯದ ಬಗ್ಗೆ ಗಮನ ಹರಿಸಲು ಸುಪ್ರೀಂಕೋರ್ಟ್ ಹಿರಿಯ ವಕೀಲ ಗೋಪಾಲ್ ಸುಬ್ರಮಣ್ಯಂರನ್ನು ಆಯ್ಕೆ ಮಾಡಿದೆ. ಜಸ್ಟಿಸ್ ಲೋಧಾ ಸಮಿತಿ ಶಿಫಾರಸು ಮಾಡಿರುವ ಒಂದು ರಾಜ್ಯಕ್ಕೆ ಒಂದು ಮತ ನೀತಿಯು ಸಮಾನತೆಯ ಬದಲಿಗೆ ಅಸಮಾನತೆಗೆ ಕಾರಣವಾಗುತ್ತಿದೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ವಕೀಲ ಅರವಿಂದ್ ದತ್ತಾರ್ ನ್ಯಾಯಾಲಯಕ್ಕೆ ತಿಳಿಸಿದರು.
ಜನಸಂಖ್ಯೆಯನ್ನು ಪರಿಗಣಿಸದೆಯೇ ಐಸಿಸಿ ಒಂದು ದೇಶ-ಒಂದು ಮತ ನೀತಿಯನ್ನು ಸ್ವೀಕರಿಸಿದೆ. ಬಿಸಿಸಿಐ ಒಂದು ದೇಶ-ಒಂದು ಮತ ಮಾದರಿಯನ್ನು ಯಾಕೆ ಸ್ವೀಕರಿಸಲು ಸಿದ್ಧವಿಲ್ಲ. ಇದು ಕ್ರಿಕೆಟ್‌ನಲ್ಲಿ ಸಮಾನತೆ ತರಲಿದೆ ಎಂದು ನ್ಯಾಯಪೀಠ ಉತ್ತರಿಸಿದೆ







