ಬಂಜಾರರ ಅಕಾಡಮಿ ಸ್ಥಾಪಿಸಲು ಪ್ರೊ.ಸಿದ್ದರಾಮಯ್ಯ ಆಗ್ರಹ
ಬಂಜಾರ ಸಾಂಸ್ಕೃತಿಕ ನಾಡ ಹಬ್ಬ ಉದ್ಘಾಟನೆ
ಬೆಂಗಳೂರು, ಎ. 25: ಬ್ಯಾರಿ, ತುಳು, ಕೊಂಕಣಿ ಭಾಷಾ ಅಕಾಡಮಿಗಳ ಮಾದರಿಯಲ್ಲೆ ಸಾಂಸ್ಕೃತಿಕವಾಗಿ ಸಂಪನ್ನವಾದ ಬಂಜಾರ ಸಮುದಾಯಕ್ಕೆ ಅಕಾಡಮಿ ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಇಂದಿಲ್ಲಿ ಆಗ್ರಹಿಸಿದ್ದಾರೆ.
ರವಿವಾರ ಕೋಣನಕುಂಟೆಯ ಸಿಲಿಕಾನ್ ಸಿಟಿ ಶಾಲೆಯಲ್ಲಿ ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಬಂಜಾರ ಸಾಂಸ್ಕೃತಿಕ ನಾಡ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದಂತಹ ತಳಸಮುದಾಯಗಳಿಗೆ ದೊಡ್ಡ ಪರಂಪರೆ ಇದೆ. ಆದರೆ ಚರಿತ್ರೆ ಇಲ್ಲ, ಚರಿತ್ರೆ ಶ್ರೀಮಂತರ ಸ್ವತ್ತಾಗಿದೆ. ದೊಡ್ಡ ಪರಂಪರೆಗಳು ನಿತ್ಯ ನಿರಂತರ ಎಂದರು.
ಸಾಮಾಜಿಕ ಹಕ್ಕು ಬಾಧ್ಯತೆಗಳಿಂದ ವಂಚಿತವಾದ ಬಂಜಾರ ಸಮುದಾಯ ಇನ್ನೂ ಸಂಘಟಿತವಾಗಿಲ್ಲ. ಹೀಗಾಗಿ ಇಷ್ಟೇ ಪ್ರಮಾಣದಲ್ಲಿರುವ ಬ್ಯಾರಿ, ತುಳು, ಕೊಂಕಣಿ ಭಾಷೆಗಳಿಗೆ ಅಕಾಡಮಿಗಳಿವೆ. ಆದರೆ ಭಾಷೆ ಹಾಗೂ ಸಾಂಸ್ಕೃತಿಕ ಸಂಪನ್ನವಾದ ಬಂಜಾರ ಸಮುದಾಯಕ್ಕೆ ಅಕಾಡಮಿಯಿಲ್ಲ. ಇವರಿಗೆ ತುರ್ತಾಗಿ ಅಕಾಡಮಿ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.
ಬಂಜಾರ ಸಮುದಾಯದ ಕಲೆ, ಭಾಷೆ ಸಂಸ್ಕೃತಿ ಅಧ್ಯಯನ ಆಗಬೇಕು. ಬಂಜಾರ ಭಾಷೆಗೆ ಲಿಪಿ ಅಗತ್ಯವಿದೆ. ಬಂಜಾರರು ದೇವನಾಗರಿ ಲಿಪಿ ಅಥವಾ ಪ್ರಾದೇಶಿಕ ಭಾಷೆ ಕನ್ನಡವನ್ನೇ ಲಿಪಿಯಾಗಿ ಬಳಸಬಹುದಾಗಿದೆ ಎಂದ ಅವರು, ಬಂಜಾರರು ಶೈಕ್ಷಣಿಕವಾಗಿ ಮುನ್ನಡೆಗೆ ಬರಬೇಕು ಎಂದು ಆಗ್ರಹಿಸಿದರು.
ಬಂಜಾರರು ಕಸುಬು ಕಳೆದುಕೊಂಡ ಸ್ಥಿತಿಯಲ್ಲಿದ್ದು, ಭೂಮಿಯಿಲ್ಲ, ಉತ್ಪನ್ನ ಇಲ್ಲ. ಹೀಗಾಗಿ ನಗರಕ್ಕೆ ವಲಸೆ ಬರುತ್ತಿದ್ದಾರೆ ಹಾಗೂ ಮತಾಂತರ ಹೊಂದುತ್ತಿದ್ದಾರೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಅಗತ್ಯ. ಬಂಜಾರ ಸಮುದಾಯದ ವೈವಿಧ್ಯತೆಗೆ ಉದಾರವಾಗಿಲ್ಲ. ವೇಷ ಭೂಷಣ, ಕಸೂತಿ ಕೌಶಲ್ಯ ಇದೆ. ಕಲಾ ಪ್ರಾವೀಣ್ಯತೆ ಗಳಿಸಿಕೊಂಡಿದ್ದಾರೆ. ಶಾಸ್ತ್ರ, ಆಚರಣೆಗಳು ಶ್ರೀಮಂತವಾಗಿವೆ. ಹೀಗಾಗಿ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಸಂಶೋಧನೆಗೆ ತೊಡಗಬೇಕೆಂದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿತ್ರ ನಿರ್ದೇಶಕ ಕೆ.ಆರ್.ಗುರುಪ್ರಸಾದ್, ನನಗೆ ಕಲೆ ಬಗ್ಗೆ ಮೊದಲಿಗೆ ಆಸಕ್ತಿ ಹುಟ್ಟಿದ್ದು ಈ ಬಂಜಾರರನ್ನು ನೋಡಿ, ಸಿನೆಮಾದಂತೆ ಬಣ್ಣದ ಬದುಕು ಈ ಬಂಜಾರರದು ಅದಕ್ಕೆ ಆರ್ಕಷಿತನಾಗಿದ್ದೆ. ಈ ಸಮುದಾಯದ ಹಿರಿಯರ ವಿದ್ಯೆ, ಪರಂಪರೆಯನ್ನು ಯುವ ಜನತೆ ಮುಂದುವರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಬಂಜಾರರು ಎತ್ತುಗಳ ಮೇಲೆ ಉಪ್ಪು ಇತ್ಯಾದಿ ದವಸ-ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದವರು. ರಾಜರಿಗೆ ಯುದ್ಧ ಸಾಮಗ್ರಿಗಳನ್ನು ಸಾಗಿಸುತ್ತಿದ್ದವರು. ಆಧುನಿಕತೆಯಿಂದ ರೈಲು ಬಂದು ತಮ್ಮ ವ್ಯಾಪಾರ ವೃತ್ತಿ ಕಳೆದುಕೊಂಡರು.
ಬ್ರಿಟಿಷರ ಆಗಮನವಾದಾಗ ಇವರನ್ನು ಕ್ರಿಮಿನಲ್ ‘ಟ್ರೈಬ್ಸ್’ ಎಂಬ ಕಾನೂನು ಜಾರಿಗೊಳಿಸಿದ ಪರಿಣಾಮ ಅವರ ಬದುಕು ಹೀನಾಯವಾಯಿತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಕಲ್ಪಿಸಿ ಇವರಿಗೆ ಹೊಸ ಬದುಕು ಕಟ್ಟಿಕೊಟ್ಟರು. ಬಂಜಾರರು ಆಧುನಿಕತೆಯಿಂದ ತಮ್ಮ ಮೂಲ ಸಂಸ್ಕೃತಿ ಕಳೆದುಕೊಂಡು ಬೇರೆ ಯಾವ ಸಂಸ್ಕೃತಿ ಅಳವಡಿಸಿಕೊಳ್ಳಬೇಕೆಂಬ ಗೊಂದಲದಲ್ಲಿದ್ದಾರೆ. ಆದರೆ, ಮೂಲ ಸಂಸ್ಕೃತಿ ಉಳಿಸಿ ಕೊಳ್ಳುವಂತಾಗಬೇಕೆಂದು ಹೇಳಿದರು.
ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದಿದ್ದರೂ, ಬಂಜಾರರ ತಾಂಡಗಳು ಕಂದಾಯ ಗ್ರಾಮಗಳಾಗದ್ದು ಶೋಚನೀಯ. ಹೀಗಾಗಿ ಇವರಿಗೆ ಯಾವುದೇ ಸವಲತ್ತುಗಳು ತಲುಪುತ್ತಿಲ್ಲ. ಬಂಜಾರರ ಕಸೂತಿ ಕಲೆ ಅಭಿವೃದ್ದಿಪಡಿಸಿ ವಿದೇಶಗಳಿಗೆ ರಫ್ತು ಮಾಡುವಂತಾಗಬೇಕು ಎಂದರು.
ಸಮಾರಂಭದಲ್ಲಿ ಸಾಹಿತಿ ನಾ.ದಾಮೋದರಶೆಟ್ಟಿ, ಸಿಲಿಕಾನ್ ಸಿಟಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಬಿ.ಲಕ್ಷ್ಮಣ್, ಸದಾಶಿವಯ್ಯ, ಬಿ.ಆರ್.ದೇವಾಡಿಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





