ಡೊನೇಶನ್ ಹಾವಳಿ ನಿಯಂತ್ರಣಕ್ಕಾಗಿ ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ರಚಿಸಲು ಆಗ್ರಹ

ಬೆಂಗಳೂರು, ಎ.25: ಖಾಸಗಿ ಶಾಲಾ ಕಾಲೇಜುಗಳಲ್ಲಿ ಡೊನೇಶನ್ ಹಾವಳಿ ನಿಯಂತ್ರಣಕ್ಕಾಗಿ ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ರಚನೆ ಮಾಡಬೇಕು ಹಾಗೂ ಆರ್‌ಟಿಇ ಕಾಯ್ದೆಯಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಇಂದು ಎಸ್‌ಎಫ್‌ಐ ಮತ್ತು ಪೋಷಕರ ಸಂಘಟನೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಧರಣಿ ನಡೆಸಿದವು.
ಧರಣಿನಿರತರನ್ನುದ್ದೇಶಿಸಿ ಎಸ್‌ಎಫ್‌ಐ ರಾಜ್ಯ ಕಾರ್ಯ ದರ್ಶಿ ಗುರುರಾಜ್ ದೇಸಾಯಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರದಿಂದ ಅಧಿಕೃತ ಪ್ರವೇಶಾವಕಾಶ ದಿನಾಂಕವನ್ನು ನಿಗದಿ ಮಾಡಿಲ್ಲ, ಆದರೂ ಶಿಕ್ಷಣ ಸಂಸ್ಥೆಗಳು ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿವೆ. ಸರಕಾರದ ನಿಯಮಗಳಿಗೆ ವಿರುದ್ಧವಾಗಿ ಪ್ರವೇಶ ನೇಮಕಾತಿಗಳು ಪ್ರಾರಂಭ ಮಾಡಿ ಲಕ್ಷಾಂತರ ಡೊನೇಶನ್ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿದರು.
ಕರ್ನಾಟಕ ಶಿಕ್ಷಣ ಕಾಯಿದೆ 1983 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳ ಕಾಯಿದೆ 1995 ನಿಯಮಗಳ ಪ್ರಕಾರ ಸರಕಾರ ನಿಗದಿ ಪಡಿಸಿದ ಅಭಿವೃದ್ದಿ ಶುಲ್ಕವನ್ನು ಮಾತ್ರ ಶಾಲೆಗಳು ಪಡೆಯಬೇಕಾಗಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೇ ಹಣ ವಸೂಲಿ ಮಾಡಲಾಗುತ್ತಿದೆ. ಇದನ್ನು ನಿಯಂತ್ರಣ ಮಾಡುವಲ್ಲಿ ಸರಕಾರ ಮತ್ತು ಅಧಿಕಾರಿಗಳು ವಿಫಲವಾಗಿದ್ದಾರೆ ಎಂದರು. ರಾಜ್ಯದಲ್ಲಿ ಡೊನೇಶನ್ ಹಾವಳಿಯನ್ನು ನಿಯಂತ್ರಣ ಮಾಡಲಿಕ್ಕಾಗಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಡಿಡಿಪಿಐ, ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಮುಖ್ಯ ಇಂಜಿನಿಯರ್ ಸೇರಿದಂತೆ ಪೋಷಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಪ್ರತಿನಿಧಿಗಳ ಒಂದು ಸಮಿತಿಯನ್ನು ನೇಮಿಸಬೇಕೆಂಬ ಆದೇಶವಿದ್ದರೂ ಇದುವರೆಗೂ ಜಾರಿ ಮಾಡಿಲ್ಲ ಎಂದು ದೂರಿದರು.
ಕಡ್ಡಾಯ ಶಿಕ್ಷಣ ಹಕ್ಕು(ಆರ್‌ಟಿಇ) ಕಾಯಿದೆ ಅಡಿಯಲ್ಲಿ ಅರ್ಜಿಗಳು ಸಲ್ಲಿಸಿ 15-20 ದಿನಗಳು ಕಳೆದರೂ ಇದುವರೆಗೂ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದರ ಪರಿಣಾಮ ಪೋಷಕರು ಆತಂಕ ಸ್ಥಿತಿಯಲ್ಲಿದ್ದಾರೆ. ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲಾಗದೇ, ಅರ್ಜಿ ಸಲ್ಲಿಸಿದ ಶಾಲೆಯಲ್ಲಿಯೇ ಸೀಟು ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಆದುದರಿಂದ ಕೂಡಲೇ ಡೊನೇಶನ್ ಹಾವಳಿ ನಿಯಂತ್ರಣ ಮಾಡಲಿಕ್ಕೆ ವಿದ್ಯಾರ್ಥಿ, ಪೋಷಕರು ಸೇರಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಕೇಂದ್ರೀಯ ಶಾಸನ ಜಾರಿ ಮಾಡಬೇಕು. ಸರಕಾರ ನಿಗದಿ ಮಾಡಿರುವ ಪ್ರವೇಶ ಶುಲ್ಕ ವಿವರವನ್ನು ನೋಟಿಸ್ ಬೋರ್ಡ್ ಮೇಲೆ, ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು. ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಜಂಟಿಯಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಭೆಗಳನ್ನು ಕರೆಯಬೇಕಿದೆ ಎಂದು ಹೋರಾಟಗಾರರು ಒತ್ತಾಯಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪನುರಾಜ್ ಮನವಿ ಸ್ವೀಕರಿಸಿ ಮಾತನಾಡಿ, ಆರ್‌ಟಿಇ ಕಾಯ್ದೆಯಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 4-5 ದಿನಗಳಲ್ಲಿ ವಿಲೇವಾರಿ ಮಾಡಿ, ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ರಚನೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆಯನ್ನು ನೀಡಿದರು.







