ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮತ್ತೊಬ್ಬ ಉಪನ್ಯಾಸಕನ ಬಂಧನ

ಬೆಂಗಳೂರು, ಎ.25: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಉಪನ್ಯಾಸಕನನ್ನು ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಶಿಕ್ಷಕನನ್ನು ಸಂತೋಷ್ ಎಂದು ಗುರುತಿಸಿದ್ದು, ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಷಯದ ಉಪನ್ಯಾಸಕ ಹುದ್ದೆಯಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರಯ್ಯ ಯಾನೆ ಶಿವಕುಮಾರ್ ಸ್ವಾಮೀಜಿ ಜೊತೆ ಸಂತೋಷ್ ನಿಕಟ ಸಂಪರ್ಕ ಹೊಂದಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಉಪನ್ಯಾಸಕ ಸಂತೋಷ್ ವಿದ್ಯಾರ್ಥಿಗಳಿಗೆ ಹಣಕ್ಕಾಗಿ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಎಂದು ಗೊತ್ತಾಗಿದೆ.
ಮೇ 7ರವರೆಗೂ ನ್ಯಾಯಾಂಗ ಬಂಧನ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ರುದ್ರಪ್ಪ, ಮಂಜುನಾಥ್ ಹಾಗೂ ಓಬಳರಾಜುಗೆ ಮೇ 7ರವರೆಗೂ ನ್ಯಾಯಾಂಗ ಬಂಧನದಲ್ಲಿಡಲು ಬೆಂಗಳೂರಿನ 1ನೆ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.





