ಮಾಲೆಗಾಂವ್ ಸ್ಫೋಟ: 8 ಆರೋಪಿಗಳ ಖುಲಾಸೆ

ಮುಂಬೈ, ಎ.25: ಮುಂಬೈಯ ವಿಶೇಷ ನ್ಯಾಯಾಲಯವೊಂದು 2006ರ ಮಾಲೆಗಾಂವ್ ಸ್ಫೋಟ ಪ್ರಕರಣದ 8 ಮಂದಿ ಆರೋಪಿಗಳನ್ನು ನಿರಪರಾಧಿಗಳೆಂದು ಖುಲಾಸೆಗೊಳಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಕ್ಷೇಪ ಸಲ್ಲಿಸದ ಕಾರಣ 2011ರ ನವೆಂಬರ್‌ನಲ್ಲಿ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಲಾಗಿತ್ತು. ಒಟ್ಟು 9 ಮಂದಿ ಆರೋಪಿಗಳಲ್ಲಿ ಶಬೀರ್ ಅಹ್ಮದ್ ಎಂಬಾತ 2015ರಲ್ಲಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದನು.
2006ರ ಸೆ.8ರಂದು 37 ಮಂದಿಯ ಸಾವು ಹಾಗೂ 100ಕ್ಕೂ ಹೆಚ್ಚು ಜನರು ಗಾಯಗೊಳ್ಳಲು ಕಾರಣವಾಗಿದ್ದ 4 ಬಾಂಬ್ ಸ್ಫೋಟಗಳ ಸಂಬಂಧ, ಸಲ್ಮಾನ್ ಫಾರ್ಸಿ, ನೂರುಲ್ ಹುದಾ ದೋಹಾ, ರಾಯಿಸ್ ಅಹ್ಮದ್, ಮುಹಮ್ಮದ್ ಅಲಿ, ಆಸಿಫ್ ಖಾನ್, ಜಾವೇದ್ ಶೇಕ್, ಫಾರೂಕ್ ಅನ್ಸಾರಿ ಹಾಗೂ ಇಕ್ಬಾಲ್ ಅಹ್ಮದ್ ಸಹಿತ ಆರೋಪಿಗಳ ತನಿಖೆ ನಡೆದಿತ್ತು.
ಮಾಲೆಗಾಂವ್‌ನ ನಡೇ ಕಬರಸ್ತಾನ್ ಪ್ರದೇಶದ ಹಮೀದಾ ಮಸೀದಿಯ ಬಳಿ ಸ್ಫೋಟಗಳು ಸಂಭವಿಸಿದ್ದವು. 5 ದಿನಗಳ ಬಳಿಕ, ಸೆ.13ರಂದು ಮುಹಮ್ಮದಿಯಾ ಮಸೀದಿಯ ಮೆಟ್ಟಿಲುಗಳ ಮೇಲೆ ನಕಲಿ ಬಾಂಬೊಂದು ಪತ್ತೆಯಾಗಿತ್ತು.
ತನಿಖೆ ಕೈಗೆತ್ತಿಕೊಂಡಿದ್ದ ಎಟಿಎಸ್, 9 ಮಂದಿಯನ್ನು ಬಂಧಿಸಿತ್ತು. ನಿಷೇಧಿತ ಸಿಮಿ ಸಂಘಟನೆ ಈ ಸ್ಫೋಟಗಳನ್ನು ನಡೆಸಿದೆಯೆಂದು ಅದು ಆರೋಪಿಸಿತ್ತು. ಬಳಿಕ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಎಟಿಎಸ್‌ನ ಪ್ರತಿಪಾದನೆಯನ್ನು ಬೆಂಬಲಿಸಿದ ಸಿಬಿಐ ಆರೋಪಿಗಳ ಪಟ್ಟಿಗೆ ಇನ್ನೂ 4 ಹೆಸರುಗಳನ್ನು ಸೇರಿಸಿತ್ತು.
ಈ ಸ್ಫೋಟಗಳನ್ನು ಹಿಂದೂ ಗುಂಪೊಂದು ನಡೆಸಿದೆಯೆಂದು ಸ್ವಾಮಿ ಅಸೀಮಾನಂದ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ನೀಡಿದ ಬಳಿಕ, 2011ರ ಎ.6ರಂದು ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.
2008ರ ಮಾಲೆಗಾಂವ್ ಸ್ಫೋಟದ ಪ್ರಧಾನ ಪಿತೂರಿಗಾರ ಸುನೀಲ್ ಜೋಶಿ, 2006ರ ಸ್ಫೋಟಗಳ ರೂವಾರಿಯೂ ಆಗಿದ್ದಾನೆಂದು ಅದು ಪ್ರತಿಪಾದಿಸಿತ್ತು.
ಪ್ರಕರಣದಲ್ಲಿ ಲೋಕೇಶ್ ಶರ್ಮಾ, ಧನ್ ಸಿಂಗ್, ಮನೋಹರ ಸಿಂಗ್ ಹಾಗೂ ರಾಜೇಂದ್ರ ಚೌಧರಿ ಎಂಬವರ ವಿರುದ್ಧ ಎನ್‌ಎಎ ಆರೋಪ ಪಟ್ಟಿ ದಾಖಲಿಸಿತ್ತು.







