ಕೇಂದ್ರೀಯ ವಿವಿಗಳಲ್ಲಿ 5,928 ಬೋಧಕರ ಹುದ್ದೆಗಳು ಖಾಲಿ
ಹೊಸದಿಲ್ಲಿ,ಎ.25: ವಿವಿಧ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಜನವರಿ 1,2016ಕ್ಕೆ ಇದ್ದಂತೆ ಒಟ್ಟು 16,600 ಬೋಧಕರ ಹುದ್ದೆಗಳಿದ್ದು, ಈ ಪೈಕಿ 5,928 ಹುದ್ದೆಗಳು ಖಾಲಿಯಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರು ಸೋಮವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಹೊಣೆಗಾರಿಕೆ ಸ್ವಾಯತ್ತ ಸಂಸ್ಥೆಗಳಾಗಿರುವ ಕೇಂದ್ರೀಯ ವಿವಿಗಳದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು,ಯುಜಿಸಿಯು ನೀಡಿರುವ ಮಾಹಿತಿಯಂತೆ 39 ಕೇಂದ್ರೀಯ ವಿವಿಗಳಲ್ಲಿ ಮಂಜೂರಾಗಿರುವ 34,272 ಬೋಧಕೇತರ ಹುದ್ದೆಗಳ ಪೈಕಿ 10,015 ಹುದ್ದೆಗಳು ಖಾಲಿಯಿವೆ ಎಂದು ತಿಳಿಸಿದರು.
ವಿವಿಧ ಕೇಂದ್ರೀಯ ವಿವಿಗಳಲ್ಲಿ ಪರಿಶಿಷ್ಟ ಪಂಗಡ ವರ್ಗದಲ್ಲಿ 112 ಪ್ರೊಫೆಸರ್ ಹುದ್ದೆಗಳು ಖಾಲಿಯಿದ್ದು, ಈ ಪೈಕಿ ಗರಿಷ್ಠ 31 ಹುದ್ದೆಗಳು ದಿಲ್ಲಿಯ ವಿವಿಗಳಲ್ಲಿವೆ. ಅಲ್ಲದೆ ಈ ವರ್ಗದಲ್ಲಿ ವಿವಿಧ ವಿವಿಗಳಲ್ಲಿ 245 ಸಹಾಯಕ ಪ್ರೊಫೆಸರ್‌ಗಳ ಹುದ್ದೆಗಳು ಖಾಲಿಯಿವೆ ಎಂದು ಇರಾನಿ ಪ್ರತ್ಯೇಕ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದರು.





