ಜೂ.15ರವರೆಗೆ ಕುಡಿಯುವ ನೀರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ

ಬೆಳಗಾವಿ, ಎ.25: ರಾಜ್ಯದಲ್ಲಿನ ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜೂನ್ 15ರ ವರೆಗೆ ಜನ, ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಜಿಲ್ಲೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿದ್ದರಾಮಯ್ಯ, ನೀರಿನ ಸಮಸ್ಯೆ ಸೃಷ್ಟಿಯಾಗಿರುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸೂಚಿಸಿದರು.
ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲೂ ಹಣಕಾಸಿನ ಕೊರತೆಯಿಲ್ಲ. ಎಲ್ಲ ಗ್ರಾಮಗಳ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬರ ಪರಿಹಾರ ಕಾರ್ಯಗಳ ಕುರಿತು ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಸರಕಾರಕ್ಕೆ ವರದಿ ನೀಡಬೇಕೆಂದು ಹೇಳಿದರು.
ಜಿಲ್ಲೆಯ ಬರಪೀಡಿತ 9 ತಾಲೂಕುಗಳ ಪೈಕಿ 147 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದ ಅವರು, ತಾಪಮಾನ ಹೆಚ್ಚಿರುವುದರಿಂದ ಜನ ಹಾಗೂ ಜಾನುವಾರುಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಅಲ್ಲದೆ, ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಇದೇ ವೇಳೆ ನಿರ್ದೇಶನ ನೀಡಿದರು.
ಶಾಸಕರ ನೇತೃತ್ವದ ಕಾರ್ಯಪಡೆ(ಟಾಸ್ಕ್‌ಫೋರ್ಸ್) ಈಗಾಗಲೇ ತಲಾ 50ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ಕಂತನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದ ಅವರು, ಶಾಸಕರ ನಿಧಿಯನ್ನು ಕುಡಿಯುವ ನೀರಿಗೆ ಬಳಸಿಕೊಳ್ಳುವಂತೆ ಆದೇಶ ಹೊರಡಿಸಿದೆ ಎಂದು ಹೇಳಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೇಳಿಕೊಂಡು ಬರುವವರಿಗೆ ಕೆಲಸ ನೀಡಬೇಕು.
ಉದ್ದೇಶಿತ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದ ಅವರು, ಬರ ಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಿಂದ ಕೈಗೊಳ್ಳಲಾದ ಬರ ಪರಿಹಾರ ಕಾರ್ಯಗಳಿಗೆ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
48 ಕೋಟಿ ರೂ.ಬಿಡುಗಡೆ: ಬೆಳಗಾವಿ ಜಿಲ್ಲೆಗೆ ತುರ್ತಾಗಿ ಕುಡಿಯುವ ನೀರಿಗಾಗಿ 48 ಕೋಟಿ ರೂ. ಬಿಡುಗಡೆ ಮಾಡಿದ್ದು, ಆ ಪೈಕಿ 32. 75 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದ ಅವರು, ಗೋಶಾಲೆ, ಮೇವು ಬ್ಯಾಂಕ್ ಸ್ಥಾಪಿಸಲು ಹಣಕಾಸಿನ ನೆರವು ನೀಡಲಾಗಿದೆ ಎಂದು ವಿವರಿಸಿದರು.
ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಸಮ್ಮತಿ
ಬೆಳಗಾವಿ, ಎ. 25: ಮಹಾರಾಷ್ಟ್ರದ ವಾರಣಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ನೀರು ಬಿಡಲು ಒಪ್ಪಿದ್ದಾರೆ ಎಂದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಒಂದು ಟಿಎಂಸಿ ನೀರನ್ನು ಇಂದು ಬಿಡುಗಡೆ ಮಾಡಲಿದ್ದು, ನಾಳೆ ಕೃಷ್ಣಾ ನದಿಗೆ ನೀರು ಬಂದು ಸೇರುವ ನಿರೀಕ್ಷೆಯಿದೆ ಎಂದ ಅವರು, ಬರ ಪೀಡಿತ ಪ್ರದೇಶಗಳ ಜನರಿಗೆ ಅಗತ್ಯ ಕುಡಿಯುವ ನೀರು, ಉದ್ಯೋಗ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು







